ಕೊಟ್ಟೂರು: ಕೃಷಿ ಭೂಮಿಗಳಿಗೆ ಪಂಪ್‌ಸೆಟ್ ಮೂಲಕ ನೀರು ಪೂರೈಸಲು 1 ತಾಸು ಸಹ ವಿದ್ಯುತ್ ಪೂರೈಕೆಯಾಗದೇ ರೈತರಿಗೆ ವಿಪರೀತ ತೊಂದರೆಯಾಗುತ್ತಿದೆ. ಕಳೆದ ಹತ್ತಾರು ದಿನಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಜೆಸ್ಕಾಂನವರು ಸಮಸ್ಯೆ ನಿವಾರಿಸಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ಗೊಲ್ಲರಹಳ್ಳಿ, ದೂಪದಹಳ್ಳಿ ಗ್ರಾಮಸ್ಥರು ಶುಕ್ರವಾರ ಇಲ್ಲಿನ ಜೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಮರ್ಪಕ ವಿದ್ಯುತ್ ಪೂರೈಕೆಯಾಗದೇ ಇರುವ ಕಾರಣಕ್ಕಾಗಿ ಪಂಪ್‌ಸೆಟ್‌ಗಳ ಮೂಲಕ ನೀರು ಪೂರೈಸಲು ದಿನದಲ್ಲಿ ಅರ್ಧ ಗಂಟೆ ಸಹ ಆಗುತ್ತಿಲ್ಲ. ಕೂಡಲೇ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲು ಕೂಡಲೇ 7 ತಾಸುಗಳ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಇದಾಗದ ಹೊರತು ಇಲ್ಲಿಂದ ಕದಲುವುದಿಲ್ಲ ಎಂದು ಕೆಲವೊತ್ತು ಹೊರಗಡೆ ಜೆಸ್ಕಾಂ ಕಚೇರಿಯ ಬಾಗಿಲಲ್ಲಿ ಪ್ರತಿಭಟನೆ ನಡೆಸಿದರು.ರೈತರ ಆಕ್ರೋಶ ಗಮನಿಸಿ ಸಮಾಧಾನಪಡಿಸಲು ಕಚೇರಿಯಿಂದ ಹೊರಬಂದ ಜೆಸ್ಕಾಂ ಎಇಇ ನಾಗರಾಜ ಮತ್ತು ಜೆಇ ನಾಗರಾಜ ಅವರನ್ನು ರೈತರು ತರಾಟೆಗೆ ತೆಗೆದುಕೊಂಡರು. ಎಇಇ ನಾಗರಾಜ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಶನಿವಾರದಿಂದ ಬೆಳಿಗ್ಗೆ 4 ಗಂಟೆಯಿಂದ ನಿರಂತರ 7 ತಾಸುಗಳ ವಿದ್ಯುತ್ ಪೂರೈಕೆ ಮಾಡಲು ಕ್ರಮ ಜರುಗಿಸುತ್ತೇವೆ. ನಿರಂತರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ವ್ಯತ್ಯಯದ ಅವಧಿಯ ವಿದ್ಯುತ್‌ನ್ನು ಸಹ ಹೆಚ್ಚುವರಿಯಾಗಿ ಪೂರೈಸುತ್ತೇವೆ ಎಂದು ಹೇಳಿದರು.
ಎಇಇ ಅವರ ಭರವಸೆಯ ಮಾತುಗಳನ್ನು ಕೇಳಿದ ರೈತರು, "ನಿಮ್ಮ ಈ ಆದೇಶ ಕೂಡಲೇ ಜಾರಿಗೆ ಬರಬೇಕು. ಗ್ರಾಮಕ್ಕೆ ಪೂರೈಕೆಯಾಗುವ ನಿರಂತರ ಜ್ಯೋತಿ ಸಹ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಇದರಿಂದ ಗೊಲ್ಲರಹಳ್ಳಿ ಗ್ರಾಮದವರು ಪದೇಪದೇ ಕತ್ತಲಲ್ಲೇ ಜೀವನ ಸಾಗಿಸುವಂತಾಗಿದೆ ಎಂದು ದೂರಿ ಗಲಾಟೆ ಮಾಡತೊಡಗಿದರು. ಅಧಿಕಾರಿಗಳು ಮತ್ತು ರೈತರ ನಡುವೆ ಜೋರಾದ ಗಲಾಟೆಯಾಗುತ್ತಿರುವ ಮಾಹಿತಿ ಅರಿತು ಸ್ಥಳಕ್ಕೆ ಪಿಎಸ್‌ಐ ಗೀತಾಂಜಲಿ ಸಿಂಧೆ ಜೆಸ್ಕಾಂ ಅಧಿಕಾರಿಗಳೊಂದಿಗೆ ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಿದರು. ಶನಿವಾರದಿಂದ ಖಂಡಿತ ಸತತ ವಿದ್ಯುತ್ ಪೂರೈಕೆ ಮಾಡಿಸುತ್ತೇವೆ ಎಂದು ಭರವಸೆ ನೀಡಿ ನೆರೆದಿದ್ದವರನ್ನು ಸ್ಥಳದಿಂದ ಚದುರಿಸಿದರು.ಗೊಲ್ಲರಹಳ್ಳಿಯ ಮಾರುತಿ, ಕೊಟ್ರೇಶ, ಕೋಟಿಲಿಂಗಪ್ಪ, ಮತ್ತಿತರ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.