ಬಳ್ಳಾರಿ: ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ಖಾಲಿ ಮಾಡುವ ಯೋಜನೆಗಳನ್ನು ನಿಲ್ಲಿಸಿ ಕಾರ್ಮಿಕರ ಆರೋಗ್ಯ, ಪಿಂಚಣಿ, ಮಕ್ಕಳ ಶಿಕ್ಷಣಕ್ಕೆ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಎಐಯುಟಿಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್, ಕರ್ನಾಟಕ ರಾಜ್ಯದ ಲಕ್ಷಾಂತರ ಕಟ್ಟಡ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ದುಡಿಯುವ ಅವರ ಬೆವರಿನ ದುಡಿಮೆಯಿಂದ ಸಂಗ್ರಹವಾಗಿರುವ ನಿಧಿಯನ್ನು ಕಲ್ಯಾಣಮಂಡಳಿಯ ಘೋಷಿತ ಹಕ್ಕುಗಳ ಜಾರಿಗಾಗಿ ಬಳಸುವ ಬದಲು, ಭ್ರಷ್ಟಾಚಾರಕ್ಕೆ ಇಂಬು ಕೊಡುವ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಅತ್ಯಂತ ಖಂಡನೀಯ. ಮಂಡಳಿಯು ಹಣದ ಕೊರತೆಯ ನೆಪ ಹೇಳಿ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಲಾಗಿದೆ. ನೀಡುವ ಅತ್ಯಲ್ಪ ಸಹಾಯಧನವನ್ನು 2 ವರ್ಷಗಳದ್ದು ಬಾಕಿ ಇರಿಸಿಕೊಳ್ಳಲಾಗಿದೆ. ಇದರಿಂದಾಗಿ ಕಾರ್ಮಿಕರ ಮಕ್ಕಳು ಶಿಕ್ಷಣವನ್ನೇ ನಿಲ್ಲಿಸುವಂತಾಗಿದೆ. ಹಲವಾರು ಕ್ಲೇಮ್ ಗಳು ಆದೇಶವಾಗಿದ್ದರೂ ಖಾತೆಗೆ ಹಣ ಸೇರಿಲ್ಲ. ಪಿಂಚಣಿಗೆ ಅನಗತ್ಯ ನಿರ್ಬಂಧ ಹೇರುತ್ತಿದ್ದಾರೆ. ಆರೋಗ್ಯ, ಪಿಂಚಣಿ, ಮಕ್ಕಳ ಶಿಕ್ಷಣದಂತಹ ಬದುಕಿನ ವಿಷಯಗಳಿಗೆ ಯೋಜನೆಗಳನ್ನು ಜಾರಿಮಾಡುವುದರ ಬದಲು ಹಣ ನುಂಗುವ ವಿವಿಧ ಹೆಸರಿನ ಕಿಟ್ ನೀಡಿಕೆ, ವಸ್ತುಗಳ ಖರೀದಿ ಮತ್ತು ವಿತರಣೆಯಲ್ಲಿಯೇ ಕಲ್ಯಾಣ ಮಂಡಳಿಯು ತೊಡಗಿದೆ. ಇದರಿಂದಾಗಿ ಮಂಡಳಿಯ ಸಾವಿರಾರು ಕೋಟಿ ರೂಪಾಯಿ ಕರಗಿ ಹೋಗಿದ್ದಲ್ಲದೆ, ಘೋಷಿತ ಹಕ್ಕುಗಳನ್ನೇ ಕಡಿತ ಗೊಳಿಸುವ, ಕಸಿದುಕೊಳ್ಳುವ ಕ್ರಮಗಳು ಕಟ್ಟಡ ಕಾರ್ಮಿಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಟ್ಟಡ ಕಾರ್ಮಿಕರ ನೈಜ ಬೇಡಿಕೆಗಳಾದ, ವಿವಿಧ ಹೆಸರಿನ ಕಿಟ್‌ಗಳ ವಿತರಣೆಯನ್ನು ತಕ್ಷಣವೇ ನಿಲ್ಲಿಸಿ, ಅದರ ಸಂಪೂರ್ಣ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು. 2 ವರ್ಷ ಬಾಕಿಯಿರುವ ಶೈಕ್ಷಣಿಕ ಧನಸಹಾಯವನ್ನು ಹಳೆಯ ದರದಲ್ಲಿ ಕೂಡಲೇ ಪಾವತಿಸಬೇಕು. ಶಾಲಾ ಕಿಟ್‌ಗಳಿಗೆ ಮೀಸಲಿಟ್ಟಿರುವ 115 ಕೋಟಿ ಹಣವನ್ನು ಮಕ್ಕಳಿಗೆ ಶೈಕ್ಷಣಿಕ ಧನಸಹಾಯವಾಗಿ ವಿತರಿಸಬೇಕು.ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ಗುಣಮಟ್ಟದ ನಗದುರಹಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯವನ್ನು ಖಾತರಿಪಡಿಸಬೇಕು. 60 ವರ್ಷ ತುಂಬಿದ ನಂತರ 6 ತಿಂಗಳೊಳಗೆ ಪಿಂಚಣಿಗೆ ಅರ್ಜಿ ಸಲ್ಲಿಸಬೇಕೆಂಬ ಅನ್ಯಾಯದ ನಿಯಮವನ್ನು ತಕ್ಷಣವೇ ರದ್ದುಪಡಿಸಿ, 60 ವರ್ಷ ತುಂಬಿದ ಪ್ರತಿಯೊಬ್ಬ ನೋಂದಾಯಿತ ಕಟ್ಟಡ ಕಾರ್ಮಿಕರಿಗೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸುರೇಶ್ ಅವರು ವಹಿಸಿದ್ದರು. ಸಂಘಟನೆಯ ಜಿಲ್ಲಾ ಪ್ರಮುಖರಾದ ಜಯರಾಜ್, ನೀಲಪ್ಪ, ಮೊಹಮದ್ ಎಜಸ್, ಮಲ್ಲಿಕಾರ್ಜುನ್, ಪಂಪ, ಶೇಷಾವಲಿ ಮತ್ತಿತರರು ಭಾಗವಹಿಸಿದ್ದರು. ಕಲ್ಯಾಣ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರು ಮತ್ತು ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.