ರಾಣಿಬೆನ್ನೂರು: ರೈತರು ಬೆಳೆ ವಿಮೆ ಹಣವನ್ನು ಇನ್ಮುಂದೆ ಆಯಾ ಗ್ರಾಮಗಳಲ್ಲಿರುವ ಸೊಸೈಟಿಯ ಮೂಲಕವೇ ತುಂಬಬಹುದು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಸಂತೋಷಕುಮಾರ ಪಾಟೀಲ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬೆಳೆ ವಿಮೆ ತುಂಬಲು ನಗರದ ಕೆಸಿಸಿ ಬ್ಯಾಂಕಿಗೆ ತೆರಳಿ ಹಣ ಪಾವತಿಸಬೇಕಾಗಿತ್ತು. ಇದರಿಂದ ರೈತರಿಗೆ ಬಹಳಷ್ಟು ಅನಾನುಕೂಲತೆ ಉಂಟಾಗುತ್ತಿತ್ತು. ಇದನ್ನು ಮನಗಂಡು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಾಗ ಸೊಸೈಟಿಯ ಮೂಲಕ ಹಣ ತುಂಬಲು ಅಗತ್ಯ ಕ್ರಮ ಕೈಗೊಳ್ಳಲು ಕೆಸಿಸಿ ಬ್ಯಾಂಕ್‌ಗೆ ನಿರ್ದೇಶನ ನೀಡಿದ್ದರು. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಗ್ರಾಮಗಳಲ್ಲಿರುವ ಸೊಸೈಟಿಗಳಿಗೆ ಬೆಳೆವಿಮೆ ತುಂಬಿಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಬ್ಯಾಂಕಿನವರಿಗೆ ಲಾಗಿನ್ ಮತ್ತು ಪಾಸ್‌ವರ್ಡ್ ನೀಡಲಾಗಿದ್ದು ಇನ್ನು ಮುಂದೆ ರೈತರು ಸೊಸೈಟಿಯಲ್ಲಿಯೇ ಬೆಳೆವಿಮೆ ಪಾವತಿಸಬಹುದು. ಬೆಳೆ ವಿಮೆ ತುಂಬಲು ಜುಲೈ 30 ಕೊನೆಯ ದಿನಾಂಕವಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬೆಳೆವಿಮೆ ಸರಳೀಕರಣಗೊಳಿಸಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಕೆಸಿಸಿ ಬ್ಯಾಂಕ್ ಅಧ್ಯಕ್ಷರಿಗೆ, ನಿರ್ದೇಶಕರುಗಳಿಗೆ, ವ್ಯವಸ್ಥಾಪಕರಗಳಿಗೆ ಧನ್ಯವಾದಗಳು ಎಂದರು.

ರಾಜ್ಯದ ಅರ್ಧ ಭಾಗದಲ್ಲಿ ಈ ವರ್ಷ ಭೀಕರ ಬರಗಾಲ ಉಂಟಾಗಿದೆ. ಮುಂದೆ ಮಳೆ ಬರುವ ನಿರೀಕ್ಷೆಯು ಇಲ್ಲದಾಗಿದೆ. ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಇಲ್ಲದಂತಾಗಿದೆ. ಸದ್ಯ ಬಿತ್ತನೆಯಾಗಿರುವ ರೈತರ ಬೆಳೆಗಳಿಗೆ ಸರ್ಕಾರ ನೀರು ಬಿಡುವ ವ್ಯವಸ್ಥೆ ಕಲ್ಪಿಸಿದರೆ ರೈತನ ಬಾಳು ಹಸನಾಗಬಹುದಾಗಿದೆ. ಎಂತಹ ಪರಿಸ್ಥಿತಿ ಸಂದರ್ಭ ಬಂದರೂ ಸಹ ರೈತರು ಧೃತಿಗೆಡದೆ, ಆತ್ಮವಿಶ್ವಾಸ ಕಳೆದುಕೊಳ್ಳದೇ ಧೈರ್ಯದಿಂದ ಬದುಕು ಕಟ್ಟಿಕೊಳ್ಳಲು ನಿರ್ಧಾರ ಕೈಗೊಳ್ಳಬೇಕು ಎಂದರು.