ಸಾರಾಂಶ
ಕನಕಪುರ: ತಾಲೂಕು ಕಚೇರಿಯಲ್ಲಿ ಲಂಚ ಕೊಡದೆ ರೈತರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೂಡಲೆ ಅಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಜಿಡ್ಡು ಹಿಡಿದಿರುವ ಆಡಳಿತ ವ್ಯವಸ್ಥೆಗೆ ಚುರುಕುಗೊಳಿಸಬೇಕು ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ಆಗ್ರಹಿಸಿದರು.
ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮಂಜುನಾಥ್‌ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಂದಾಯ ಮತ್ತು ಸರ್ವೆ ಇಲಾಖೆಗಳು ಜಮೀನು ಮತ್ತು ನಿವೇಶನಗಳ ದಾಖಲೆಗಳನ್ನು ಪೂರೈಸುವ ಇಲಾಖೆಗಳಾಗಿವೆ. ಪೋಡಿ, ದುರಸ್ತಿ, ಹದ್ದು ಬಸ್ತು, 11 ಇ ಸ್ಕೆಚ್, ವಿಭಾಗ ಮಾಡಿಕೊಳ್ಳಲು ಸರ್ವೆ ಇಲಾಖೆ ದಾಖಲೆಗಳನ್ನು ಮಾಡಿಕೊಡಬೇಕಿದೆ. ಆದರೆ ತಾಲೂಕಿನ ಕಂದಾಯ ಮತ್ತು ಸರ್ವೆ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆ. ಲಂಚ ಕೊಡದೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.ಅಧಿಕಾರಿಗಳ ಲಂಚದ ಆಸೆ ಮತ್ತು ಬೇಜವಾಬ್ದಾರಿ ತನದಿಂದ ರೈತರು ಕೊಟ್ಟ ದಾಖಲೆಗಳನ್ನು ತಿಂಗಳುಗಟ್ಟಲೆ ಕೊಡದೆ ಸತಾಯಿಸುತ್ತಾರೆ. ಅಧಿಕಾರಿಗಳು ರೈತರ ಕೆಲಸಗಳಿಗೆ ಜಮೀನುಗಳಿಗೆ ಬಂದರೆ ಸಾವಿರಾರು ರು. ಲಂಚ ಕೊಡಬೇಕು. ಇದರಿಂದ ರೈತರು ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಇದರಿಂದ ರೈತರ ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತರು ಸಾಲಗಾರರಾಗುತ್ತಿದ್ದಾರೆ. ಅದಕ್ಕೆ ಅಧಿಕಾರಿಗಳೆ ಹೊಣೆ. ಈ ವಿಷಯ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಡಿಲ್ಲ. ತಾಲೂಕು ದಂಡಾಧಿಕಾರಿಗಳು ಅಧಿಕಾರಿಗಳ ಸಭೆ ಕರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಡುವಣಗೆರೆ ಕುಮಾರ್, ರೈತ ಮುಖಂಡ ಸಿದ್ದರಾಜು, ರವಿಚಂದ್ರ ಇತರರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:
ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘದ ಸಂಚಾಲಕ ಚೀಲೂರು ಮುನಿರಾಜು ನೇತೃತ್ವದಲ್ಲಿ ಪದಾಧಿಕಾರಿಗಳು ಕನಕಪುರ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.