ಸಾರಾಂಶ
ರಾಮನಗರ: ಜಾನಪದ ಕಲೆಗಳ ಉಳಿವಿಗೆ ಅನುದಾನ ಕೊಡುವುದರ ಜೊತೆಗೆ ಜಾನಪದ ಜಾತ್ರೆಯನ್ನು ಮತ್ತೆ ಆರಂಭಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ತಿಮ್ಮೇಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ನಗರದ ಜಾನಪದ ಲೋಕದಲ್ಲಿ ಮಹಿಳಾ ಜಾನಪದ ಲೋಕೋತ್ಸವ-2025ರಲ್ಲಿ ಯುವ ಜನೋತ್ಸವ ಉದ್ಘಾಟಿಸಿದ ಅವರು, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಜನರ ಸಹಕಾರದ ಜೊತೆಗೆ ಸರ್ಕಾರದ ನೆರವೂ ಅಗತ್ಯವಿದೆ. ಜಾನಪದಕ್ಕೆ ಅಳಿವಿಲ್ಲ. ಯಾವತ್ತೂ ಜನಪದರೇ ಮುಂದಿರುತ್ತಾರೆ. ಮೆರವಣಿಗೆಯಲ್ಲಿ ಜನಪದರನ್ನು ಹಿಂಬಾಲಿಸುತ್ತೇವೆ. ನಮ್ಮ ಮುಂದಿನ ತಲೆಮಾರಿಗೆ ಜನಪದ ವರ್ಗಾವಣೆ, ಬೆಳವಣಿಗೆ, ಅಭಿವೃದ್ಧಿಗಾಗಿ ನಾನು ಯುವಕರಿಗೆ ಕಲೆ ಕಲಿಸುವ ನಿಟ್ಟಿನಲ್ಲಿ ದತ್ತಿನಿಧಿ ನೀಡಿದ್ದೇನೆ ಎಂದು ಹೇಳಿದರು.ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಹಳ್ಳಿಗಳು ಜನಪದದ ಬೇರುಗಳು. ವೈವಿಧ್ಯಮಯ ಸೋಪುಗಳಿಂದ ಮೈಕೈ ತೊಳೆಯುತ್ತೇವೆ. ಆದರೆ, ಮನಸ್ಸನ್ನು ತೊಳೆಯಲಾಗುವುದಿಲ್ಲ. ಇಂದು ಜಾನಪದವನ್ನು ಮನಸ್ಸು ಮತ್ತು ಎದೆಗೆ ಹಾಕಬೇಕಿದೆ. ಇಂದು ಜಾನಪದವನ್ನು ಉಳಿಸಲು, ಗಿಡ ಮರಗಳಂತೆ ಪಾತಿ ಮಾಡಿ, ನೀರುಣಿಸಬೇಕಿದೆ ಎಂದು ಹೇಳಿದರು.
ದೇಶದಲ್ಲಿ 140 ಕೋಟಿ ಜನಸಂಖ್ಯೆಗೆ 400 ಕೋಟಿ ಮೊಬೈಲುಗಳಿವೆ. ನಾವು ಮೊಬೈಲ್ ಕೈಯಲ್ಲಿ ಹಿಡಿದಿದ್ದೇವೆಯೋ ಅಥವಾ ಮೊಬೈಲ್ ನಮ್ಮ ಕೈ ಹಿಡಿದಿದೆಯೋ ತಿಳಿಯುತ್ತಿಲ್ಲ. ಜನಪದರು ಮಣ್ಣಿನ ಜೊತೆಗಿನ ನಂಟನ್ನು ಬಿಟ್ಟಿಲ್ಲ. ನೀರಿನ ಜೊತೆ, ಗುಡುಗು ಮಿಂಚಿನ ಜೊತೆ ಮಾತನಾಡುತ್ತಿದ್ದರು. ಮಣ್ಣಿನ ಗಮಲು ಮರೆಯಾಗಿದೆ. ಇಂದು ನಾವು ಊರು, ತೇರು, ಹಬ್ಬ, ಜಾತ್ರೆ, ಅಜ್ಜ-ಅಜ್ಜಿಯರ ಸಂಬಂದಗಳನ್ನು ಮರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಶೋತ್ತಮ ಬಿಳಿಮಲೆ ಮಾತನಾಡಿ, ಬ್ರಿಟೀಷರು ಭಾರತಕ್ಕೆ ಬಂದಾಗ ಬರೆಯುವ ಸಂಸ್ಕೃತಿ ಬಂದಿತು. ಆದರೆ ಜನಪದರ ಬದುಕನ್ನು ಯಾರೂ ದಾಖಲಿಸಲಿಲ್ಲ. ಬ್ರಿಟೀಷ್ ಸಂಗ್ರಹಕಾರ ಕರ್ನಲ್ ಮೆಕೆಂಜೆ ಮೊದಲಿಗೆ ಜನಪದರ ಬಾಳು ಬದುಕನ್ನು ಬರೆದಿಡುವ ಪ್ರಯತ್ನವನ್ನು ಮಾಡಿದರು. ಜೋಕುಗಳು, ಗಾದೆ, ಒಗಟುಗಳನ್ನು ಬರೆಯುವ ಪ್ರಯತ್ನಗಳಾದವು. ಬಂಟರ ನಾಡಿನ ಕಾಡು ಕಥೆ, ಜನಪದ ರಾಮಾಯಣ ಮತ್ತು ದ್ರೌಪದಿ ವಸ್ತ್ರಾಭರಣದ ಪ್ರಸಂಗದ ಸ್ವಾರಸ್ಯವನ್ನು ತಿಳಿಸಿದರು.
ಜಾನಪದ ವಿದ್ವಾಂಸರಾದ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿ, ದಕ್ಷಿಣ ಕರ್ನಾಟಕದಲ್ಲಿ ಮಹಿಳೆಯರಲ್ಲಿ ಯಾವುದೇ ಪ್ರದರ್ಶಕ ಕಲೆಗಳು ಇಲ್ಲ. ನಾಟಿ ಪದಗಳು, ಜೋಗುಳದ ಹಾಡುಗಳು, ದೇವರ ಪದಗಳು, ಸೋಬಾನೆ ಪದಗಳು ಮಾತ್ರ ಚಾಲ್ತಿಯಲ್ಲಿವೆ. ಬುಡಕಟ್ಟು ಹೆಣ್ಣುಮಕ್ಕಳು ಈ ವಿಚಾರದಲ್ಲಿ ಮುಂದಿದ್ದು, ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ.ಹಿ.ಚಿ.ಬೋರಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನೇಜಿಂಗ್ ಟ್ರಸ್ಟಿಗಳಾದ ಆದಿತ್ಯ ನಂಜರಾಜ್, ಆಡಳಿತ ಮಂಡಳಿ ಸದಸ್ಯರಾದ ಬಸವಲಿಂಗಯ್ಯ, ಬಾಲಕೃಷ್ಣ ಹೆಗಡೆ, ವಿ.ಎಲ್.ಪಾಟೀಲ್, ಡಾ.ವೇಮಗಲ್ ನಾರಾಯಣಸ್ವಾಮಿ, ಎಚ್.ಆರ್.ಸುಜಾತ ಉಪಸ್ಥಿತರಿದ್ದರು.
8ಕೆಆರ್ ಎಂಎನ್ 7,8,9.ಜೆಪಿಜಿ7.ರಾಮನಗರದ ಜಾನಪದ ಲೋಕದಲ್ಲಿ ಮಹಿಳಾ ಜಾನಪದ ಲೋಕೋತ್ಸವ-2025 ಅನ್ನು ಅತಿಥಿಗಳು ಉದ್ಘಾಟಿಸಿದರು.
8,ಮಹಿಳಾ ಜಾನಪದ ಲೋಕೋತ್ಸವದಲ್ಲಿ ಕಲೆಗಳ ಪ್ರದರ್ಶನ