ಬಳ್ಳಾರಿ: ರಾಜ್ಯ ಸರ್ಕಾರ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನಪಡಿಸಿ ಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ಕಳವಳ ವ್ಯಕ್ತಪಡಿಸಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತದ ಕೃಷಿ ಬಿಕ್ಕಟ್ಟು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.ಬೃಹತ್ ಕಾರ್ಖಾನೆಗಳು, ವಿಮಾನ ನಿಲ್ದಾಣ, ಹೆದ್ದಾರಿ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳಿಗೆ ರಾಜ್ಯದಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ. ರೈತರಿಗೆ ಉದ್ಯೋಗದ ಆಮಿಷವೊಡ್ಡಿ ವಂಚಿಸಲಾಗುತ್ತಿದೆ. ಅಭಿವೃದ್ಧಿಗೆ ಫಲವತ್ತಾದ ಜಮೀನುಗಳನ್ನು ವಶಪಡಿಸಿಕೊಳ್ಳುವ ಬದಲು ನಿರುಪಯುಕ್ತ ಜಮೀನುಗಳ ಖರೀದಿ ಮಾಡಬೇಕು. ನಾನಾ ಯೋಜನೆಗಳ ನೆಪದಲ್ಲಿ ಫಲವತ್ತಾದ ಭೂಮಿಗೆ ಧಕ್ಕೆ ತರುವಂತಾಗಬಾರದು ಎಂದು ಹೇಳಿದರು.
ರಾಜ್ಯ ಸರ್ಕಾರ ಜಮೀನು ಕಳೆದುಕೊಂಡ ರೈತರಿಗೆ ವೈಜ್ಞಾನಿಕವಾದ ಬೆಲೆ ನೀಡುತ್ತಿಲ್ಲ. ಜಮೀನು ಕಳೆದುಕೊಂಡು ಪರಿಹಾರಕ್ಕಾಗಿ ಅಲೆಯುವ ನಿರ್ಮಾಣ ಸೃಷ್ಟಿಸಲಾಗುತ್ತಿದೆ. ಕೈಗಾರಿಕೆ ಹೆಸರಿನಲ್ಲಿ ವಶಪಡಿಸಿಕೊಂಡ ಜಮೀನುಗಳಲ್ಲಿ ಹತ್ತಾರು ವರ್ಷಗಳಾದರೂ ಕೈಗಾರಿಕೆ ತಲೆ ಎತ್ತುವುದಿಲ್ಲ. ಬಳಿಕ ಅದೇ ಜಮೀನನ್ನು ಬಂಡವಾಳ ಶಾಹಿಗಳ ಕೈಗೆ ಒಪ್ಪಿಸುವ ಕೃತ್ಯಕ್ಕೆ ಸರ್ಕಾರಗಳೇ ಮುಂದಾದರೆ ಈ ದೇಶದ ಕೃಷಿಕನ ಪಾಡೇನು ಎಂದು ಪ್ರಶ್ನಿಸಿದರಲ್ಲದೆ, ಒಂದೆಡೆ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ, ಸಕಾಲಕ್ಕೆ ಬೆಳೆಗೆ ನೀರು ಸಿಗದೆ ರೈತರು ಒದ್ದಾಡುತ್ತಿದ್ದರೆ ಮತ್ತೊಂದೆಡೆ ಸರ್ಕಾರದ ಜನವಿರೋಧಿ ಭೂಸ್ವಾಧೀನ ನಡೆಗೆ ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ ಎಂದು ಹೇಳಿದರು.ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಹೊಸ ತಲೆಮಾರಿನವರು ಸರ್ಕಾರಿ ಹುದ್ದೆಯನ್ನು ನೆಚ್ಚಿಕೊಳ್ಳದೆ ತಾವು ಪಡೆದುಕೊಂಡ ಜ್ಞಾನವನ್ನು ಕೃಷಿಗೆ ಬಳಸಿಕೊಳ್ಳಬೇಕು. ಆ ಮೂಲಕ ಭಾರತದ ಕೃಷಿ ಎದುರಿಸುತ್ತಿರುವ ಬಿಕ್ಕಟ್ಟಿಗೆ ಪರಿಹಾರ ಹುಡುಕಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚೂಸಾಬ್ ಸಂಡೂರು, ದೇಶದ ಬಹುಪಾಲು ರೈತರು ಮುಂಗಾರು ಮಳೆಯನ್ನು ಅವಲಂಬಿಸಿದ್ದಾರೆ. ಕೃಷಿ ವೆಚ್ಚ ಜಾಸ್ತಿಯಾಗಿ ಆದಾಯ ಕುಸಿಯುತ್ತಿದೆ. ಬಡ್ಡಿರಹಿತ ಸಾಲ ಸಿಗುತ್ತಿಲ್ಲ. ಅಮೆರಿಕ ಕೃಷಿ ವ್ಯಾಪಾರಿ ಧೋರಣೆ ರೈತರ ಹಿತಾಸಕ್ತಿಯನ್ನು ಕಾಪಾಡುತ್ತಿಲ್ಲ. ಇವೆಲ್ಲವುಗಳಿಂದ ಭಾರತದ ರೈತ ತಲ್ಲಣಕ್ಕೀಡಾಗಿದ್ದಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ ಮಾತನಾಡಿ, ಕಾಲಮಾನಕ್ಕೆ ಅನುಗುಣವಾಗಿ ರೈತರು ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ. ರಾಸಾಯನಿಕ ವಸ್ತುಗಳನ್ನು ಕಡಿಮೆ ಬಳಸಿ ವಿಷಮುಕ್ತ ಆಹಾರ ಪದಾರ್ಥಗಳನ್ನು ಬೆಳೆದು ಭಾರತ ದೇಶದ ಪ್ರಗತಿಗೆ ಕೈಜೋಡಿಸಬೇಕಾದ ಅಗತ್ಯವಿದೆ. ಸರ್ಕಾರ ರೈತರ ಬೆಳೆಗೆ ಬೆಂಬಲ ಬೆಲೆಯನ್ನು ಒದಗಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಪ್ರಾಧ್ಯಾಪಕ ಗಂಟೆಪ್ಪ ಶೆಟ್ಟಿ, ಅತಿಥಿ ಉಪನ್ಯಾಸಕರಾದ ಓಬಣ್ಣ, ಜಯಶೀಲ, ಅರ್ಜುನ್, ರೈತ ಮುಖಂಡರಾದ ಗಣೇಶ ಸ್ವಾಮಿ, ಓಂಕಾರಗೌಡ, ವಿಶ್ವನಾಥ್ ಉಪಸ್ಥಿತರಿದ್ದರು.