ಮುಂಗಾರು ಬಿತ್ತನೆಗಾಗಿ ಜಮೀನು ಸಿದ್ಧಪಡಿಸಲು ಅಣಿಯಾದ ಹಿರೇಕೆರೂರು ರೈತರು

| Published : May 20 2024, 01:37 AM IST

ಮುಂಗಾರು ಬಿತ್ತನೆಗಾಗಿ ಜಮೀನು ಸಿದ್ಧಪಡಿಸಲು ಅಣಿಯಾದ ಹಿರೇಕೆರೂರು ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ನಾಲ್ಕು ದಿವಸಗಳ ಹಿಂದೆ ಸ್ವಲ್ಪಮಟ್ಟಿಗೆ ಮಳೆ ಸುರಿದಿದ್ದರಿಂದ ಕೆಲವು ರೈತರು ಮುಂಗಾರು ಬಿತ್ತನೆಗಾಗಿ ಜಮೀನುಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆಗಾಗಿ ಮಳೆ ದಾರಿ ಕಾಯುತ್ತಿದ್ದಾರೆ.

ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರು

ಅಲ್ಲಲ್ಲಿ ಮಳೆ ಪ್ರಾರಂಭವಾದರೂ ತಾಲೂಕಿನಲ್ಲಿ ಇನ್ನು ಬಿಸಿಲಿನ ಧಗೆಯಿಂದ ಜನರು ಹೈರಾಣಾಗುತ್ತಿದ್ದಾರೆ. ಆದರೆ ಮೂರು ನಾಲ್ಕು ದಿವಸಗಳ ಹಿಂದೆ ಸ್ವಲ್ಪಮಟ್ಟಿಗೆ ಮಳೆ ಸುರಿದಿದ್ದರಿಂದ ಕೆಲವು ರೈತರು ಮುಂಗಾರು ಬಿತ್ತನೆಗಾಗಿ ಜಮೀನುಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಮತ್ತೆ ಕೆಲವರು ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಿತ್ತನೆಗಾಗಿ ಮಳೆ ದಾರಿ ಕಾಯುತ್ತಿದ್ದಾರೆ.

ಮುಂಗಾರು ಮಳೆಗೂ ಮುನ್ನ ತಾಲೂಕಿನ ಕೆರೆ ಕಟ್ಟೆಗಳು ಬರಿದಾಗಿದ್ದು, ಮಳೆ ಬಂದರೆ ಅಷ್ಟೇ ಬೆಳೆ ಎಂಬಂತಾಗಿದೆ. ಈ ಬಾರಿ ಮುಂಗಾರು ಪೂರ್ವದಲ್ಲಿ ಮೂರು ಬಾರಿ ಮಳೆಯಾಗಿದೆ. ಭೂಮಿ ಹದಗೊಳಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಬಿಸಿಲಿನ ಧಗೆಯಿಂದ ತಾಲೂಕಿನ ಏಕೈಕ ಜೀವನಾಡಿಯಾದ ಕುಮದ್ವತಿ ನದಿ ನೀರಿಲ್ಲದೆ ಭಣಗುಡುತ್ತಿದೆ.ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ತಿಂಗಳ ಮೊದಲನೆ ವಾರದಲ್ಲಿ ವಾಡಿಕೆಯಂತೆ ಮುಂಗಾರು ಆರಂಭವಾಗಲಿದ್ದು, ಮಳೆ ಶುರುವಾದರೆ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗಲಿವೆ.ಹಿರೇಕೆರೂರು ತಾಲೂಕಿನಲ್ಲಿ ೫೬,೦೦೦ ಹೆಕ್ಟೇರ್‌ ಭೂ ಪ್ರದೇಶ ಸಾಗುವಳಿ ಕ್ಷೇತ್ರವಾಗಿದ್ದು, ೪೯,೦೦೦ ಹೆಕ್ಟೇರ್‌ ಭೂ ಪ್ರದೇಶ ಒಣ ಬೇಸಾಯ, ೭೦೦೦ ಹೆಕ್ಟೇರ್‌ ಭೂ ಪ್ರದೇಶ ನೀರಾವರಿ ಬೇಸಾಯ ಆಗಿದೆ. ತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆಗೆ ಆದ್ಯತೆ ನೀಡಲಾಗುತ್ತಿದ್ದು, ಹತ್ತಿ, ಶೇಂಗಾ, ಸೋಯಾಬೀನ್, ಹೈಬ್ರಿಡ್‌ ಜೋಳ ಸೇರಿದಂತೆ ದ್ವಿದಳ ಧ್ಯಾನ ಬೆಳೆಯಲು ರೈತರು ಆಸಕ್ತಿ ತೋರಿಸಿದ್ದಾರೆ.ಹಿರೇಕೆರೂರ ಹಾಗೂ ರಟ್ಟೀಹಳ್ಳಿ ತಾಲೂಕಿನಲ್ಲಿ ಒಟ್ಟು ೩ ರೈತ ಸಂಪರ್ಕ ಕೇಂದ್ರಗಳಲ್ಲಿ ೫ ಉಪ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜವನ್ನು ಬುಧವಾರದಿಂದ ವಿತರಣೆ ಮಾಡಲಾಗುವುದು. ರೈತರು ತಾಳ್ಮೆಯಿಂದ ಪಡೆದುಕೊಂಡು ಮಳೆಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಬಿ. ಗೌಡಪ್ಪಳವರ ಹೇಳಿದರು.