ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಈ ವರ್ಷ ಉತ್ತಮ ಮುಂಗಾರಿನ ನಿರೀಕ್ಷೆ ಹೆಚ್ಚಿಸಿದೆ. ಬರದಿಂದ ಕಂಗಟ್ಟಿರುವ ರೈತರ ಮುಖದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆ ಮಂದಹಾಸ ಮೂಡಿಸಿದೆ. ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ರೈತರು ಚಿತ್ತ ಹೊಲ-ಗದ್ದೆಗಳ ಹದಗೊಳಿಸಲು ಸಜ್ಜಾಗುತ್ತಿದ್ದಾರೆ. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗುವ ನಿರೀಕ್ಷೆಯೂ ಇದೆ. ಹೀಗಾಗಿ ಕೃಷಿ ಇಲಾಖೆ ರೈತರಿಗೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಬೇಡಿಕೆಗಿಂತ ಹೆಚ್ಚಾಗಿಯೇ ದಾಸ್ತಾನು ಮಾಡಲಾಗಿದೆ. ಬೇಸಿಗೆಯ ಬಿಸಿಲ ಬೇಗೆಯಿಂದ ತತ್ತರಿಸಿದ್ದ ರೈತರಿಗೆ ಮಳೆಯಾಗುತ್ತಿರುವುದು ಸ್ವಲ್ಪ ಸಮಾಧಾನ ತಂದಿದೆ. ಮಳೆ ಬೀಳುತ್ತಿದ್ದಂತೆ ರೈತರು ಪೂರ್ವ ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಲು ಭೂಮಿ ಹದಮಾಡಿಕೊಳ್ಳಲು ಮುಂದಾಗಿದ್ದಾರೆ.ಜಿಲ್ಲೆಯಲ್ಲಿ 1,23,580 ಹೆಕ್ಟೆರ್ ಬಿತ್ತನೆ ಕ್ಷೇತ್ರವಿದ್ದು, ವಾಣಿಜ್ಯ ಬೆಳೆ ಅಡಕೆಯನ್ನು ಬಿಟ್ಟರೆ ಭತ್ತವೇ ಪ್ರಧಾನವಾಗಿದೆ. ಇನ್ನುಳಿದಂತೆ ಮುಸುಕಿನ ಜೋಳ, ರಾಗಿ ಅಲಸಂದೆ, ತೊಗರಿ, ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬೆಳೆಸಲಾಗುತ್ತದೆ. ಜಾನುವಾರಿಗೆ ಪ್ರಿಯವಾದ ಮೇವು ಭತ್ತ. ವರ್ಷಪೂರ್ತಿ ಆಹಾರವಾಗುವುದರಿಂದ ಮುಂಗಾರು ಹಂಗಾಮಿನಲ್ಲಿ ರೈತರು ಹೆಚ್ಚು ಭತ್ತ ಬೆಳೆಯುತ್ತಾರೆ. ಪ್ರಸಕ್ತ ಮುಸುಕಿನ ಜೋಳ, ರಾಗಿ, ತೊಗರಿ, ಅಲಸಂದೆ, ಶೇಂಗಾ ಸೇರಿ ವಿವಿಧ ಬೆಳೆ ಬಿತ್ತನೆ ಕಾರ್ಯ ನಡೆದಿದೆ. ಎರಡರಿಂದ ಮೂರು ಹದ ಮಳೆ ಬಿದ್ದರೆ, ಜೋಳ ಬೆಳೆಯಲು ಅನುವಾಗುತ್ತದೆ. ಜಿಲ್ಲೆಯಲ್ಲಿ ಬಹಳಷ್ಟು ಮಂದಿ ರೈತರು ಬೇಸಿಗೆ ಬೆಳೆ ಬೆಳೆದಿದ್ದು, ಬೆಳೆ ಕಟಾವು ಮಾಡಿ, ಜಮೀನು ಮತ್ತೆ ಹಸನುಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ.
ಕಳೆದ ವರ್ಷ ಬರದಿಂದಾಗಿ ಭತ್ತ, ಜೋಳ ಸೇರಿ ಇತರೆ ಬೆಳೆಗಳು ಬಾಡಿದ್ದವು. ಈಗ ಕೆಲ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಳೆಯಾಗಿರುವುದರಿಂದ ಮುಂಗಾರು ಹಂಗಾಮಿನ ಕೃಷಿ ಕೃಷಿ ಚಟುವಟಿಕೆಯತ್ತ ರೈತರು ಮುಖ ಮಾಡಿದ್ದಾರೆ. ಜಿಲ್ಲೆಯಲ್ಲಿ ಈವೆರೆಗಿನ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮುಂಗಾರು ಪೂರ್ವ ಮಳೆಯಾಗುತ್ತಿರುವುದರಿಂದ ಹೊಲದತ್ತ ರೈತರು ಚಿತ್ತ ಹರಿದಿದೆ. ಅದಕ್ಕಾಗಿ ರೈತರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಜಿಲ್ಲಾಡಳಿತ ಕೂಡ ಕ್ರಮ ಕೈಗೊಂಡಿದೆ.----------
2-3 ತಿಂಗಳಿಗೆ ಬೇಕಾದಷ್ಟು ಸಂಗ್ರಹಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಇರುವುದರಿಂದ ಬಿತ್ತನೆ ಹೆಚ್ಚಾಗುವ ಸಾಧ್ಯವೂ ಇದೆ. ಹೀಗಾಗಿ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದೆ. ಮುಂದಿನ 2-3 ತಿಂಗಳಿಗೆ ಆಗುವಷ್ಟು ದಾಸ್ತಾನು ಇದೆ. ಮುಂದಿನ ವಾರದೊಳಗೆ ಮತ್ತಷ್ಟು ದಾಸ್ತಾನು ಬರಲಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ.
-ಪೂರ್ಣಿಮಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ.ಬೇಡಿಕೆಗಿಂತ ಹೆಚ್ಚು ದಾಸ್ತಾನುಜಿಲ್ಲೆಯ ಈ ಬಾರಿ ಮೇ ಅಂತ್ಯದವರೆಗೆ 27184 ಮೆಟ್ರಿಕ್ ಟನ್ ನಷ್ಟು ರಸಗೊಬ್ಬರ ಬೇಡಿಕೆ ಇದ್ದು, ಬೇಡಿಕೆಗಿಂತ ಎರಡುಪಟ್ಟು ದಾಸ್ತಾನು ಲಭ್ಯತೆ ಇದೆ. ಯುರಿಯಾ 19609, ಡಿಎಪಿ 9454, ಎಂಒಪಿ 2598, ಎನ್‌ಪಿಕೆಎಸ್ 23742, ಎಸ್‌ಎಸ್‌ಪಿ 1419 ಮೆಟ್ರಿಕ್ ಟನ್ ನಷ್ಟು ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜ ಲಭ್ಯತೆ: ಇನ್ನೂ ಈ ಬಾರಿ 24,744 ಕ್ವಿಂಟಾಲ್‌ನಷ್ಟು ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, 35,625 ಕ್ವಿಂಟಾಲ್ ನಷ್ಟು ದಾಸ್ತಾನು ಲಭ್ಯವಿದೆ. ಭತ್ತ 23,600 ಕ್ವಿಂಟಾಲ್, ಮುಸುಕಿನ ಜೋಳ 7,500, ತೊಗರಿ 275, ರಾಗಿ 3000, ಅಲಸಂದಿ 250, ಶೇಂಗಾ 1000 ಕ್ವಿಂಟಾಲ್‌ನಷ್ಟು ದಾಸ್ತಾನು ಲಭ್ಯವಿದೆ. ಅಗತ್ಯವಿದ್ದರೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.