40 ವರ್ಷ ದಾಟಿದವರು 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿ: ಡಾ.ದಾನೇಶ್ವರಿ ಸಲಹೆ

| Published : May 20 2024, 01:37 AM IST

40 ವರ್ಷ ದಾಟಿದವರು 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿ: ಡಾ.ದಾನೇಶ್ವರಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ಮಕ್ಕಳಿಗೂ ಕೆಲವೊಮ್ಮೆ ದೃಷ್ಠಿದೋಷ ಉಂಟಾಗುತ್ತದೆ. ಅಂತಹ ಮಕ್ಕಳಿಗೆ ಕನ್ನಡಕದ ಅವಶ್ಯಕತೆ ಇದೆ. ಅತಿಯಾದ ಮೊಬೈಲ್‌, ಲ್ಯಾಪ್ ಟ್ಯಾಪ್‌ ಉಪಯೋಗಿಸಿದಾಗ ದೃಷ್ಠಿ ದೋಷ ಬರುವ ಸಾದ್ಯತೆ ಇದೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

40 ವರ್ಷ ದಾಟಿದವರು ಪ್ರತಿ 6 ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ವೈದ್ಯೆ ಡಾ.ದಾನೇಶ್ವರಿ ಸಲಹೆ ನೀಡಿದರು.

ಅವರು ಭಾನುವಾರ ಕುದುರೆಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೀತೂರು, ಕಾನೂರು ಹಾಗೂ ಕೆಸುವೆ ಪ್ರಾ.ಕೃಷಿ ಪತ್ತಿನ ಸಹಕಾರ ಸಂಘ, ಕೊಪ್ಪ ಯಡಗೆರೆ ಸೊಸೈಟಿ, ಕುದುರೆಗುಂಡಿ ಅಶ್ವಗುಂಡೇಶ್ವರ ಆಟೋ ಚಾಲಕರ ಸಂಘ ಹಾಗೂ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸೆ, ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಚಿಕ್ಕ ಮಕ್ಕಳಿಗೂ ಕೆಲವೊಮ್ಮೆ ದೃಷ್ಠಿದೋಷ ಉಂಟಾಗುತ್ತದೆ. ಅಂತಹ ಮಕ್ಕಳಿಗೆ ಕನ್ನಡಕದ ಅವಶ್ಯಕತೆ ಇದೆ. ಅತಿಯಾದ ಮೊಬೈಲ್‌, ಲ್ಯಾಪ್ ಟ್ಯಾಪ್‌ ಉಪಯೋಗಿಸಿದಾಗ ದೃಷ್ಠಿ ದೋಷ ಬರುವ ಸಾದ್ಯತೆ ಇದೆ. 40 ವರ್ಷ ದಾಟಿದವರಿಗೆ ಹತ್ತಿರದ ದೃಷ್ಠಿ ಕಡಿಮೆಯಾಗುತ್ತದೆ. ಅಂತವರು ಲೆನ್ಸ್‌, ಕನ್ನಡಕ ಬಳಸಬಹುದು. 50 ವರ್ಷ ದಾಟಿದವರಿಗೆ ಕಣ್ಣಿಗೆ ಪೊರೆ ಬರುವ ಸಾದ್ಯತೆ ಇರುತ್ತದೆ. ವೈದ್ಯರ ಸಲಹೆ ಮೇರೆಗೆ ಕಣ್ಣಿನ ಪೊರೆ ತೆಗೆಯಬೇಕು. ಇಲ್ಲದಿದ್ದರೆ ಕಣ್ಣಿನ ಪೊರೆ ದಪ್ಪವಾಗುತ್ತದೆ. ಮುಂದೆ ಕನ್ನಡಕ ಹಾಕಿದರೂ ದೃಷ್ಠಿ ಕಾಣುವುದಿಲ್ಲ. ಆದ್ದರಿಂದ ಕಣ್ಣಿನ ಪೊರೆ ಬಂದವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿ.ಪಿ ಹಾಗೂ ಸುಗರ್‌ ಖಾಯಿಲೆ ಇದ್ದವರು ಕಣ್ಣಿನ ಬಗ್ಗೆ ಜಾಗ್ರತೆ ವಹಿಸಬೇಕು. ಕಣ್ಣಿಗೆ ಬರುವ ರಕ್ತನಾಳದಲ್ಲಿ ಬ್ಲಾಕ್ ಆಗುವ ಸಾದ್ಯತೆ ಇದೆ. ವಿವಿಧ ಖಾಯಿಲೆಗಳಿಗೆ ನಿರಂತರವಾಗಿ ಮಾತ್ರೆ ತಿನ್ನುವರಿಗೆ ಕಣ್ಣಿನ ತೊಂದರೆ ಜಾಸ್ತಿ ಕಾಣಿಸಿಕೊಳ್ಳಲಿದೆ ಎಂದರು.

ಶಿವಮೊಗ್ಗದ ಮೆಗಾನ್‌ ಆಸ್ಪತ್ರೆ ರಕ್ತದಾನ ಕೇಂದ್ರದ ಆಶಾ ಮಾಹಿತಿ ನೀಡಿ, ರಕ್ತದಾನ ಶ್ರೇಷ್ಠ ದಾನವಾಗಿದೆ. ನೀವು ನೀಡಿದ ರಕ್ತವನ್ನು 3 ಭಾಗಗಳಾಗಿ ಮಾಡುತ್ತೇವೆ. ಇದರಿಂದ 3 ಜನರಿಗೆ ರಕ್ತ ನೀಡಿ ಜೀವ ಉಳಿಸಬಹುದು. ಈ ಹಿಂದೆ ದಿನಕ್ಕೆ 30 ರಿಂದ 40 ಬಾಟಲ್ ಬೇಕಾಗುತ್ತಿತ್ತು. ಈಗ ದಿನಕ್ಕೆ 100 ಬಾಟಲ್‌ ರಕ್ತ ಬೇಕಾಗುತ್ತದೆ. ಆರೋಗ್ಯವಂತವರು ರಕ್ತದಾನ ನೀಡಬಹುದು. ರಕ್ತ ನೀಡುವುವರು 24 ಗಂಟೆ ಒಳಗೆ ಮದ್ಯಪಾನ ಮಾಡಿರಬಾರದು ಎಂದರು.

ಸೀತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್‌.ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸೃಷ್ಠಿ ನೋಡಬೇಕಾದರೆ ದೃಷ್ಠಿ ಅಗತ್ಯವಾಗಿದೆ. ಜನರಿಗೆ ಅನುಕೂಲವಾಗಲಿ ಎಂದು ವಿವಿಧ ಸಂಘ ಸಂಸ್ಥೆಗಳು ಸೇರಿ ಉಚಿತ ಕಣ್ಣಿನ ಪರೀಕ್ಷೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಿದ್ದೇವೆ. ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಕೊಳ್ಳಬೇಕು. ಈ ಹಿಂದೆ ಸಹ ಕಣ್ಣಿನ ಶಿಬಿರ ನಡೆಸಿದ್ದೆವು. ಇದರಿಂದ ಜನರಿಗೆ ಅನುಕೂಲವಾಗಿತ್ತು. ರಕ್ತದಾನವು ಅತಿ ಶ್ರೇಷ್ಠವಾದ ದಾನವಾಗಿದ್ದು ಪ್ರತಿಯೊಬ್ಬರೂ ರಕ್ತದಾನ ಮಾಡಿ ಎಂದು ಸಲಹೆ ನೀಡಿದರು.

ಅತಿಥಿಗಳಾಗಿ ಶಂಕರ ಕಣ್ಣಿನ ಆಸ್ಪತ್ರೆಯ ಪೇಷಂಟ್‌ ಕೇರ್‌ ಮ್ಯಾನೇಜರ್‌ ರಂಜಿತ, ಕಾನೂರು ವಿಎಸ್‌ಎಸ್‌ಎನ್‌ ಅಧ್ಯಕ್ಷ ಪ್ರಶಾಂತ್‌, ಕುದುರೆಗುಂಡಿ ಶಾಲೆ ಎಸ್‌ಡಿಎಂಸಿ ಉಪಾಧ್ಯಕ್ಷ ಲಕ್ಷ್ಮಣ, ಶಾಲಾ ಮುಖ್ಯೋಪಾಧ್ಯಾಯಿನಿ ಲೀನಾ.ಡಿ ಕಾಸ್ಟಾ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಂದೀಪ, ರಕ್ತದಾನ ಕೇಂದ್ರ ಡಾ.ಶರಣ್ಯ, ಡಾ.ವಿನಾಯಕ, ಡಾ.ಸಾಯಿಶ್ರೀ, ಆಟೋ ಚಾಲಕರ ಸಂಘದ ಶಾಶ್ವತ್ ಮತ್ತಿತರರಿದ್ದರು. ಅನಿಲ್‌ ನಿರೂಪಿಸಿ, ಎಸ್‌.ಉಪೇಂದ್ರ ವಂದಿಸಿದರು.