ಕುಷ್ಟಗಿ: ನಿರಂತರ ವಿದ್ಯುತ್‌ ಕಡಿತ, ಕಡಿಮೆ ವೋಲ್ಟೇಜ್‌ ಹಾಗೂ ಅಘೋಷಿತ ಲೋಡ್‌ಶೆಡ್ಡಿಂಗ್‌ನಿಂದ ಕೃಷಿ ಚಟುವಟಿಕೆ ಅಸ್ತವ್ಯಸ್ತಗೊಂಡಿರುವುದನ್ನು ಖಂಡಿಸಿ ತಾಲೂಕಿನ ಮೆಣೇಧಾಳ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಹಾಗೂ ತಾವರಗೇರಾ ಪಟ್ಟಣದ ರೈತರು ಸೋಮವಾರ ತಾವರಗೇರಾ ಜೆಸ್ಕಾಂ ವಿದ್ಯುತ್‌ ವಿತರಣೆ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಬೆಳಗ್ಗೆಯಿಂದಲೇ ಮೆಣೇಧಾಳ, ತಾವರಗೇರಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ರೈತರು ಜೆಸ್ಕಾಂ ಕಚೇರಿ ಎದುರು ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಕೆಲವು ದಿನಗಳಿಂದ ಪ್ರತಿನಿತ್ಯ 20ಕ್ಕೂ ಹೆಚ್ಚು ಬಾರಿ ವಿದ್ಯುತ್‌ ಕಡಿತವಾಗುತ್ತಿದೆ. ನಿಗದಿತ ಸಮಯದಲ್ಲಿ ವಿದ್ಯುತ್‌ ಪೂರೈಕೆ ಇಲ್ಲದಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಏಕಾಏಕಿ ವಿದ್ಯುತ್‌ ವ್ಯತ್ಯಯ ಮತ್ತು ಕಡಿಮೆ ವೋಲ್ಟೇಜ್‌ನಿಂದ ಪಂಪ್‌ಸೆಟ್‌ಗಳ ಮೋಟಾರ್‌ಗಳು ಸುಟ್ಟು ಹೋಗುತ್ತಿದ್ದು, ರೈತರಿಗೆ ಸಾವಿರಾರು ರುಪಾಯಿ ಹೆಚ್ಚುವರಿ ವೆಚ್ಚವಾಗುತ್ತಿದೆ ಎಂದು ದೂರಿದರು.

ರೈತ ಮುಖಂಡ ಬಾಷಾಸಾಬ ಮೆಣೇಧಾಳ ಮಾತನಾಡಿ, ಈಗಾಗಲೇ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಲ್ಪಸ್ವಲ್ಪ ಉಳಿದಿರುವ ಬೆಳೆಗಳನ್ನು ಪಂಪ್‌ಸೆಟ್‌ ಮೂಲಕ ಉಳಿಸಿಕೊಳ್ಳುವ ಪರಿಸ್ಥಿತಿಯೂ ಇಲ್ಲದಂತಾಗಿದೆ. ವಿದ್ಯುತ್‌ ವ್ಯತ್ಯಯದಿಂದ ಹೊಲಗಳಲ್ಲಿ ನಾಟಿ ಮಾಡಿರುವ ಬೆಳೆಗಳು ಒಣಗುತ್ತಿದ್ದು, ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ. ತಾವರಗೇರಾ 110 ಕೆವಿ ವಿದ್ಯುತ್‌ ಉಪಕೇಂದ್ರದ ಫೀಡರ್‌ ಸಮಸ್ಯೆಯನ್ನು ತಕ್ಷಣ ಸರಿಪಡಿಸಬೇಕು. ಮೆಣೇಧಾಳ ಗ್ರಾಮಕ್ಕೆ ಮಂಜೂರಾಗಿರುವ ವಿದ್ಯುತ್‌ ವಿತರಣೆ ಕೇಂದ್ರದ ಕಾಮಗಾರಿಯನ್ನು ವಿಳಂಬ ಮಾಡದೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಹಲವು ಬಾರಿ ಜೆಸ್ಕಾಂ ಅಧಿಕಾರಿಗಳು ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತರು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಶಾಸಕ ಭೇಟಿ: ಪ್ರತಿಭಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಾಸಕ ದೊಡ್ಡನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದರು. ಬಳಿಕ ಜೆಸ್ಕಾಂ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಭೆ ನಡೆಸಿ ಸಮಸ್ಯೆಯ ಕುರಿತು ಸಮಗ್ರ ಮಾಹಿತಿ ಪಡೆದರು. ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವಿದ್ಯುತ್‌ ವ್ಯತ್ಯಯಕ್ಕೆ ಕಾರಣವಾಗಿರುವ ದೋಷಗಳನ್ನು ಕೂಡಲೇ ಸರಿಪಡಿಸಿ ಎರಡು ದಿನಗಳೊಳಗೆ ಪರಿಸ್ಥಿತಿ ಸುಧಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ಸ್ಥಳದಲ್ಲೇ ಜೆಸ್ಕಾಂ ಮೇಲಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಮೆಣೇಧಾಳ ಗ್ರಾಮದ ಲಿಂಕ್‌ ಲೈನ್‌ ಕಾಮಗಾರಿಯನ್ನು ಮಂಗಳವಾರದಿಂದಲೇ ಆರಂಭಿಸಿ, ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.

ಎಇಇ ಭರವಸೆ: ಕುಷ್ಟಗಿ ಜೆಸ್ಕಾಂ ಎಇಇ ಕೆಂಚಪ್ಪ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ವಿದ್ಯುತ್‌ ಪೂರೈಕೆಯಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಿ ರೈತರು ಹಾಗೂ ಸಾರ್ವಜನಿಕರಿಗೆ ಸಮರ್ಪಕ ವಿದ್ಯುತ್‌ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರೈತರು ದಿನದ ಕೃಷಿ ಕೆಲಸಗಳನ್ನು ಬದಿಗೊತ್ತಿ ಜೆಸ್ಕಾಂ ಕಚೇರಿ ಎದುರೇ ದಿನವಿಡೀ ಪ್ರತಿಭಟನೆ ನಡೆಸಿದರು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಸ್ಥಳದಲ್ಲೇ ಮಾಡಿಕೊಂಡು ತಮ್ಮ ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಮುಂದುವರಿಸಿದರು. ಶಾಸಕ ಹಾಗೂ ಜೆಸ್ಕಾಂ ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಸ್ಥಳೀಯ ಮುಖಂಡರು, ಮೆಣೇಧಾಳ ಗ್ರಾಪಂ ವ್ಯಾಪ್ತಿಯ ಒಂಬತ್ತು ಗ್ರಾಮಗಳ ರೈತರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.