ರಾಮನಗರ: ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್) ಯೋಜನೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ತ್ವರಿತಗತಿಯಲ್ಲಿ ಪರಿಹಾರ ವಿತರಿಸುವಂತೆ ಒತ್ತಾಯಿಸಿ ರೈತರು ಬೈರಮಂಗಲ ಗ್ರಾಮದ ವೃಷಭಾವತಿ ಶಾಲೆ ಬಳಿ ಶನಿವಾರ ದಿಢೀರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಬೈರಮಂಗಲ ವೃತ್ತದಿಂದ ಕೂಗಳತೆ ದೂರದಲ್ಲಿರುವ ವೃಷಭಾವತಿ ಶಾಲೆ ಬಳಿ ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಬಿಡದಿ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು, ಭೂ ಸ್ವಾಧೀನ ಪ್ರಕ್ರಿಯೆಯನ್ನು ತಡವಾಗಿ ಮಾಡುತ್ತಿರುವ ರಾಜ್ಯಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ರೈತರು, ಈ ಕೂಡಲೇ ಬಾಕಿ ಉಳಿದಿರುವ 6 ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಬೇಕು. ಭೂಮಿ ಕೊಡುವ ರೈತರಿಗೆ ಪರಿಹಾರ, ಅಭಿವೃದ್ಧಿ ಪಡಿಸಿದ ಜಾಗದಲ್ಲಿ ವಸತಿ, ವಾಣಿಜ್ಯ ನಿವೇಶನ ಹಾಗೂ ನಿವೇಶನ ರಹಿತರಿಗೂ ಸೂಕ್ತ ನಿವೇಶನ ಒದಗಿಸುವಂತೆ ಒತ್ತಾಯಿಸಿದರು.

ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ :

ಈ ವೇಳೆ ಮಾತನಾಡಿದ ಭೂ ಮಾಲೀಕರಾದ ಹೊಸೂರು ರಾಜಣ್ಣ ಮಾತನಾಡಿ, ಟೌನ್ ಶಿಪ್ ಯೋಜನೆ ಘೋಷಿಸಿ ರೆಡ್ ಜೋನ್ ಮಾಡಿದ ಮೇಲೆ 19 ವರ್ಷಗಳಿಂದ ರೈತರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. ಇದೀಗ ಸರ್ಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ರೈತರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ಕಿಡಿಕಾರಿದರು.


ರೈತರು ತಮ್ಮ ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಳ್ಳಲು ಜಮೀನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

ಇಲ್ಲಿವರೆಗೆ 2500 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡಿದ್ದಾರೆ. ಟೌನ್ ಶಿಪ್ ಯೋಜನೆ ಅನುಷ್ಠಾನಗೊಳ್ಳುವುದು ಮತ್ತಷ್ಟು ವಿಳಂಬವಾದರೆ ರೈತರು ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಿಕೊಂಡು ನಷ್ಟಕ್ಕೀಡಾಗುತ್ತಾರೆ. ಆದ್ದರಿಂದ ಸರ್ಕಾರ ತ್ವರಿತಗತಿಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ, ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಸರ್ಕಾರ ಅಂತಿಮ ಅಧಿಸೂಚನೆ ಹಾಗೂ ಭೂ ಪರಿಹಾರ ವಿತರಣೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಬೇರೆ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮುಂದಾಗುವ ಎಲ್ಲ ಅನಾಹುತಗಳಿಗೆ ರಾಜ್ಯಸರ್ಕಾರವೇ ಹೊಣೆ ಆಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಟೌನ್ ಶಿಪ್ ವಿಚಾರವಾಗಿ ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿಧಾನಸೌಧಕ್ಕೆ ಆಹ್ವಾನಿಸಿದರೆ ಹೋಗುವುದಿಲ್ಲ. ಬೈರಮಂಗಲ ವೃತ್ತಕ್ಕೆ ಕರೆಯುತ್ತಾರೆ. ಅಷ್ಟಕ್ಕೂ ಟೌನ್ ಶಿಪ್ ಯೋಜನೆಯನ್ನು ಅವರೇನು ಬೈರಮಂಗಲ ವೃತ್ತದಲ್ಲಿ ರೈತರ ಮಧ್ಯೆ ಕುಳಿತು ಮಾಡಿದ್ರಾ. ಯೋಜನೆ ಪರವಾಗಿರುವ ರೈತರನ್ನು ಕುಡುಕರು ಎಂದು ಹೀಯಾಳಿಸುತ್ತಾರೆ. ರೆಡ್ ಜೋನ್ ಮಾಡಿದ ನಿಮಗೆ ಹೋರಾಟ ಮಾಡುವ ಯಾವ ನೈತಿಕತೆ ಇದೆ ಎಂದು ಹೊಸೂರು ರಾಜಣ್ಣ ಕಿಡಿಕಾರಿದರು.

ವೃಷಭಾವತಿ ನೀರಿನಲ್ಲಿ ಕೈ ಕಾಲು ತೊಳೆಯಲಿ:

ಬೈರಮಂಗಲ ಸೊಸೈಟಿ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು ಮಾತನಾಡಿ, ರೈತರ 20 ವರ್ಷಗಳ ವನವಾಸ ಕೊನೆಗೊಳ್ಳಲೆಂಬ ಉದ್ದೇಶ ಹಾಗೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವೆಲ್ಲರು ಅಭಿವೃದ್ಧಿ ಪರವಾಗಿ ನಿಂತಿದ್ದೇವೆ. ಈಗಲೂ ಯೋಜನೆ ಜಾರಿಯಾಗದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಹೇಳಿದರು.

ವೃಷಭಾವತಿ ನದಿ ನೀರನ್ನು ಬಳಸಿ ರೈತರು ಕೃಷಿ ಚಟುವಟಿಕೆ ಮಾಡುತ್ತಿದ್ದು, ರೋಗ ರುಜಿನೆಗಳಿಗೆ ತುತ್ತಾಗುತ್ತಿದ್ದಾರೆ. ಇಲ್ಲಿನ ರೈತರ ಬದುಕು ನರಕ ಸದೃಶವಾಗಿದೆ. ಟೌನ್ ಶಿಪ್ ಯೋಜನೆ ವಿರುದ್ಧ ಹೋರಾಟಕ್ಕೆ ಬರುತ್ತಿರುವ ರೈತರು ವೃಷಭಾವತಿ ನೀರಿನಲ್ಲಿ ಕೈ ಕಾಲು ತೊಳೆದುಕೊಂಡು ಬರಲಿ ನೋಡೋಣ ಎಂದು ಸವಾಲು ಹಾಕಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಜಯಚಂದ್ರ, ಶೇಖರ್ , ನರಸಿಂಹಮೂರ್ತಿ, ಶಿವರಾಮು, ಗೌತಮ್ ಮತ್ತಿತರರು ಭಾಗವಹಿಸಿದ್ದರು.

ಕೋಟ್............

ಕುಮಾರಸ್ವಾಮಿಯವರು ಟೌನ್ ಶಿಪ್ ಘೋಷಿಸಿದಾಗ ಅಭಿವೃದ್ದಿ ಪಡಿಸಿದ ಜಾಗದಲ್ಲಿ ರೈತರಿಗೆ ಶೇಕಡ 40ರಷ್ಟು ಭೂಮಿ ಕೊಡಲು ಉದ್ದೇಶಿಸಿದ್ದರು. ಈಗಿನ ಸರ್ಕಾರ ಶೇಕಡ 50ರಷ್ಟು ಅಭಿವೃದ್ಧಿ ಪಡಿಸಿದ ಭೂಮಿ ಕೊಡುತ್ತಿದೆ. ಹೀಗಿರುವಾಗ ಅವರೇಕೆ ಟೌನ್ ಶಿಪ್ ಯೋಜನೆಗೆ ಕೈ ಜೋಡಿಸುತ್ತಿಲ್ಲ. ಇನ್ನೂ ಹೆಚ್ಚಿನ ಪರಿಹಾರ ಕೊಡಿಸುವುದಾಗಿದ್ದರೆ ಕೊಡಿಸಲಿ. ಕಳೆದ 20 ವರ್ಷಗಳಿಂದ ನಾವುಗಳು ಅವರಿಗೆ ರಾಜಕೀಯ ಶಕ್ತಿ ತುಂಬಿದವರು. ನಮ್ಮೊಂದಿಗೆ ಚರ್ಚೆ ನಡೆಸಲು ನಿಮ್ಮನ್ನು ತಡೆಯುತ್ತಿದ್ದವರು ಯಾರು. ನೀವು ಪಲಾಯನ ಮಾಡಿದ್ದು ಏಕೆ?

-ಎಚ್.ಎಚ್.ಸಿದ್ದರಾಜು, ಭೂ ಮಾಲೀಕರು

ಕೋಟ್ ..................

ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಎ.ಮಂಜುನಾಥ್ ರವರು ತಮ್ಮ ಬೇಳೆ ಬೇಯಿಸಿಕೊಳ್ಳಲು ರೈತರ ಪರವಾಗಿರುವುದಾಗಿ ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಯೋಜನೆ ಪರವಾಗಿರುವ ರೈತರು ಅವರನ್ನು ಚರ್ಚೆಗೆ ಕರೆದಿದ್ದೆವೊ. ಆದರೆ, ಪೊಲೀಸರು ಸರ್ಪಗಾವಲಿನಲ್ಲಿ ತೆರಳಿದರು. ಪ್ರಾಮಾಣಿಕವಾಗಿ ಹೋರಾಟ ಮಾಡವುದಾಗಿದ್ದರೆ ನಮ್ಮನ್ನೇಕೆ ವಿಶ್ವಾಸಕ್ಕೆ ಪಡೆಯುತ್ತಿಲ್ಲ. ರಾಜಕಾರಣಕ್ಕಾಗಿ ಹೋರಾಟ ಮಾಡಿದರೆ ಪ್ರಯೋಜನವಿಲ್ಲ.

-ಹೊಸೂರು ರಾಜಣ್ಣ, ಭೂ ಮಾಲೀಕರು

4ಕೆಆರ್ ಎಂಎನ್ 1.ಜೆಪಿಜಿ

ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು.