ಜೋಳ ಖರೀದಿ ವಿಚಾರವಾಗಿ ಕೆಎಂಎಫ್ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ಪ್ರತಿ ರೈತನಿಂದ ೫೦ ಕ್ವಿಂಟಲ್ ಜೋಳ ಖರೀದಿ ಮಾಡಬೇಕೆಂದು ಸರ್ಕಾರ ಆದೇಶಿಸಿದ್ದರೂ, ಅದನ್ನು ಗಾಳಿಗೆ ತೂರಿ ಕೇವಲ ೨೦ ಕ್ವಿಂಟಲ್ ಮಾತ್ರ ಖರೀದಿಗೆ ಮುಂದಾಗಿರುವುದಲ್ಲದೆ, ರೈತರಿಗೆ ಟೋಕನ್ ನೀಡದೆ ದಲ್ಲಾಳಿಗಳಿಗೆ ಟೋಕನ್ ನೀಡಲಾಗುತ್ತಿದೆ ಎಂದು ಆರೋಪಿಸಿ ರೈತರು ಬುಧವಾರ ಕ್ಯಾಟಲ್‌ ಫೀಲ್ಡ್‌ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಮಧು ಹಾಗೂ ರೈತ ರಾಜಮ್ಮ ಮಾಧ್ಯಮದೊಂದಿಗೆ ಮಾತನಾಡಿ, ವಿಧಾನಸೌಧದಲ್ಲಿ ಘೋಷಿಸಿದಂತೆ ಪ್ರತಿ ಹೆಕ್ಟೇರಿಗೆ ೫೦ ಕ್ವಿಂಟಲ್ ಜೋಳ ಖರೀದಿ ಮಾಡಬೇಕಿದ್ದರೂ ಕೆಎಂಎಫ್ ಈಗ ೨೦ ಕ್ವಿಂಟಲ್ ಎಂದಷ್ಟೇ ಖರೀದಿ ಮಾಡುತ್ತಿದೆ. ಅದರಲ್ಲೂ ಆಯ್ದ ಕೆಲ ರೈತರಿಗೆ ಮಾತ್ರ ಅವಕಾಶ ನೀಡಿ ಉಳಿದವರನ್ನು ಕಡೆಗಣಿಸಲಾಗಿದೆ ಎಂದು ದೂರಿದರು. ಬೆಳಿಗ್ಗೆ ೬ ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ಸುಮಾರು ೫೦೦ರಿಂದ ೬೦೦ ರೈತರು ಊಟ-ತಿಂಡಿ ಇಲ್ಲದೆ ಕೆಎಂಎಫ್ ಬಾಗಿಲಲ್ಲಿ ಕಾದರೂ, ಕೇವಲ ೫೦ ಜನರಿಗೆ ಮಾತ್ರ ಟೋಕನ್ ನೀಡಲಾಗಿದೆ. ನೀಡಿದ ಟೋಕನ್‌ಗಳೂ ಜೋಳ ಬೆಳೆದ ರೈತರಿಗೆ ಅಲ್ಲ, ಕಮಿಷನ್ ಪಡೆಯುವ ದಲ್ಲಾಳಿಗಳಿಗೆ ಎಂಬ ಆರೋಪ ಕೇಳಿಬಂದಿದೆ ಎಂದು ಆರೋಪಿಸಿದರು. ಟೋಕನ್ ಸಿಗದೆ ದಿನಗಟ್ಟಲೆ ಕಾದ ರೈತರು ಬೇಸರಗೊಂಡು ಜೋಳವನ್ನು ದಲ್ಲಾಳಿಗಳಿಗೆ ಕ್ವಿಂಟಲ್‌ಗೆ ೧೯೫೦ ರು.ಗಳ ಕಡಿಮೆ ದರಕ್ಕೆ ಮಾರುವ ಸ್ಥಿತಿ ನಿರ್ಮಾಣವಾಗಿದೆ. ಜೋಳ ಸರಿಯಾಗಿ ಬಾರದೆ ಈಗಾಗಲೇ ನಷ್ಟದಲ್ಲಿರುವ ರೈತರಿಗೆ ಉಳಿದ ಜೋಳವನ್ನು ಮಾರಲು ಅವಕಾಶ ನೀಡದೇ ಕೆಎಂಎಫ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಂಡರು. ಜೋಳ ಹಾಳಾಗುವ ಮೊದಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಪ್ರತಿಯೊಬ್ಬ ರೈತನಿಂದ ಜೋಳ ಖರೀದಿ ಮಾಡಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕುಮಾರ್, ರಾಜಮ್ಮ, ರಾಮಣ್ಣ, ಅಪ್ಪಾಜಿಗೌಡ, ಸತೀಶ್, ನಾಗೇಶ್, ಗುರು, ಪ್ರಕಾಶ್, ಜಗದೀಶ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ರೈತರು ಭಾಗವಹಿಸಿದ್ದರು.