ತೆರಿಗೆ ಸಂಗ್ರಹದಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ನಿರೀಕ್ಷಿತ ಅನುದಾನ ನೀಡದೆ ಅನ್ಯಾಯ ಎಸಗುತ್ತಿದೆ. ಒಂದು ರುಪಾಯಿ ತೆರಿಗೆಗೆ ಕನಿಷ್ಠ ೧೫ ಪೈಸೆಯನ್ನಾದರೂ ನೀಡಬೇಕಾದ ಕೇಂದ್ರ ಸರ್ಕಾರ, ಕೇವಲ ೩ ಪೈಸೆ ನೀಡುವುದರ ಮೂಲಕ ರಾಜ್ಯಕ್ಕೆ ದ್ರೋಹ ಎಸಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸರ್ಕಾರದ ಆರ್ಥಿಕ ಧೋರಣೆ ಖಂಡಿಸಿ, ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯಿಂದ ಕರ್ನಾಟಕಕ್ಕೆ ನ್ಯಾಯ ಕೊಡಿ ಎಂದು ಒತ್ತಾಯಿಸಿ ಬುಧವಾರ ಪ್ರತಿಭಟನೆ ನಡೆಸಲಾಯಿತು.ನಗರದ ರೈತ ಸಭಾಂಗಣದ ಕುವೆಂಪು ಪ್ರತಿಮೆ ಬಳಿ ಸಮಾವೇಶಗೊಂಡ ಕಾರ್ಯಕರ್ತರು, ಕೇಂದ್ರ ಸರ್ಕಾರದ ಆರ್ಥಿಕ ಧೋರಣೆಯ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ತೆರಿಗೆ ಸಂಗ್ರಹದಲ್ಲಿ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ, ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ನಿರೀಕ್ಷಿತ ಅನುದಾನ ನೀಡದೆ ಅನ್ಯಾಯ ಎಸಗುತ್ತಿದೆ. ಒಂದು ರುಪಾಯಿ ತೆರಿಗೆಗೆ ಕನಿಷ್ಠ ೧೫ ಪೈಸೆಯನ್ನಾದರೂ ನೀಡಬೇಕಾದ ಕೇಂದ್ರ ಸರ್ಕಾರ, ಕೇವಲ ೩ ಪೈಸೆ ನೀಡುವುದರ ಮೂಲಕ ರಾಜ್ಯಕ್ಕೆ ದ್ರೋಹ ಎಸಗುತ್ತಿದೆ ಎಂದು ಆರೋಪಿಸಿದರು.ಕೇಂದ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ೧೬ ಸಾವಿರ ಕೋಟಿ ರು. ನೀಡಬೇಕಿದ್ದು, ಇದುವರೆಗೆ ೯ ಸಾವಿರ ಕೋಟಿ ರು. ಬಾಕಿ ಉಳಿಸಿಕೊಂಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ೫೩೦೦ ಕೋಟಿ ರು. ಅನುದಾನ ನೀಡುವುದಾಗಿ ಎರಡು ವರ್ಷದ ಹಿಂದಿನ ಬಜೆಟ್‌ನಲ್ಲೇ ಘೋಷಿಸಿದ್ದ ಕೇಂದ್ರ ಸರ್ಕಾರ ಇದುವರೆಗೂ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಉತ್ಪಾದನೆ, ಬೆಂಗಳೂರಿಗೆ ಕುಡಿಯುವ ನೀರು ಮತ್ತು ಹೆಚ್ಚುವರಿ ನೀರು ಸಂಗ್ರಹದ ಉದ್ದೇಶದಿಂದ ಆರಂಭಗೊಂಡಿರುವ ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಕರ್ನಾಟಕ ಮತ್ತು ತಮಿಳುನಾಡು ನಡುವೆ ರಾಜಕೀಯ ಸಂಘರ್ಷವನ್ನು ಹುಟ್ಟುಹಾಕುವ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ. ಸುಪ್ರೀಂಕೋರ್ಟ್ ತಮಿಳುನಾಡಿನ ತಕರಾರು ಅರ್ಜಿಯನ್ನು ವಜಾಗೊಳಿಸಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಯೋಜನೆಯ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ೧೧ ವರ್ಷಗಳು ಕಳೆದಿದ್ದರೂ ಇದುವರೆಗೂ ಕರ್ನಾಟಕದ ಯಾವ ಮಹನೀಯರಿಗೂ ಭಾರತರತ್ನವನ್ನು ನೀಡದೆ ಸಾಂಸ್ಕೃತಿಕವಾಗಿ ಅಪಮಾನವನ್ನು ಮಾಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಶಿಫಾರಸ್ಸು ಮಾಡಿರುವ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನವನ್ನು ನೀಡುವುದರದ ಮೂಲಕ ಕರ್ನಾಟಕಕ್ಕೆ ಸಾಂಸ್ಕೃತಿಕ ನ್ಯಾಯವನ್ನು ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕಕ್ಕೆ ನ್ಯಾಯ ಕೇಳುವ ಹೋರಾಟವನ್ನು ಮಂಡ್ಯ ಜಿಲ್ಲೆಯಿಂದ ಆರಂಭಿಸಲಾಗಿದ್ದು, ಇದು ರಾಜ್ಯಾದ್ಯಂತ ವಿಸ್ತರಿಸಬೇಕಿದೆ. ಕನ್ನಡ ನಾಡಿನ ಸಂಸ್ದರು ರಾಜ್ಯದಲ್ಲಿ ರಾಜಕೀಯವಾಗಿ ಘರ್ಜಿಸುವ ಬದಲು ಕರ್ನಾಟಕದ ಪಾಲನ್ನು ತರುವಲ್ಲಿ ಕೇಂದ್ರ ಸರ್ಕಾರದ ಎದುರು ಪಕ್ಷಾತೀತವಾಗಿ ಹೋರಾಡಬೇಕು. ನಾಡಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.ವಿವಿಧ ಸಂಘಟನೆಗಳ ಮುಖಂಡರಾದ ಪ್ರೊ.ಜಿ.ಟಿ.ವೀರಪ್ಪ, ಎಚ್.ಡಿ. ಜಯರಾಂ, ಎಂ. ಕೃಷ್ಣ, ಚಂದ್ರಶೇಖರ ಆರಾಧ್ಯ, ಸುಂಡಹಳ್ಳಿ ಬಸವರಾಜು, ವೈರಮುಡಿ, ಜಯರಾಮು, ನಾರಾಯಣಸ್ವಾಮಿ, ಬೆಂಜಮಿನ್ ಥಾಮಸ್, ಹುರುಗಲವಾಡಿ ರಾಮಯ್ಯ, ಎಂ.ಎಸ್. ರಾಜಣ್ಣ, ಬಿ. ಲಿಂಗಯ್ಯ, ಎಚ್.ಪಿ. ಸತೀಶ್, ಸುದರ್ಶನ್, ಶಶಿಕುಮಾರ್, ಸಿ.ಆರ್. ರಮೇಶ, ವಿಜಯಕುಮಾರ್, ಮಹೇಶ್, ಪ್ರದೀಪ್, ಆನಂದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.