ಏಕನಾಥ ಮೆದಿಕೇರಿ ಹನುಮಸಾಗರ

ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳ ನಿರಂತರ ಏರಿಕೆಯಿಂದ ಕೃಷಿ ಚಟುವಟಿಕೆಗಳ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕುಷ್ಟಗಿ ತಾಲೂಕಿನ ಹನುಮಸಾಗರ, ತಾವರಗೇರಾ, ಚಂದ್ರಗಿರಿ ಹನಮನಾಳ, ಹೊಲಗೇರಿ, ಕಾಟಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ದುಬಾರಿ ಕೃಷಿ ಯಂತ್ರೋಪಕರಣ ಬಳಕೆ ಕಡಿಮೆ ಮಾಡಿ ಮತ್ತೆ ಸಾಂಪ್ರದಾಯಿಕ ಕೃಷಿ ಪದ್ಧತಿಗಳತ್ತ ಮುಖ ಮಾಡಿದ್ದಾರೆ.

ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ರೈತರು ಹೊಲ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಆದರೆ ಟ್ರ್ಯಾಕ್ಟರ್‌, ರೋಟವೇಟರ್, ಸೀಡರ್, ಹಾರ್ವೆಸ್ಟರ್ ಸೇರಿದಂತೆ ವಿವಿಧ ಯಂತ್ರೋಪಕರಣ ನಿರ್ವಹಣಾ ವೆಚ್ಚ ಹಾಗೂ ಇಂಧನ ಖರ್ಚು ಹೆಚ್ಚಿರುವುದರಿಂದ ಕೃಷಿ ಕಾರ್ಯಗಳಿಗೆ ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಟ್ರ್ಯಾಕ್ಟರ್‌ ಮೂಲಕ ಒಂದು ಎಕರೆ ಮಡಿಕೆ ಹೊಡೆಯಲು ₹1.500 ವೆಚ್ಚವಾಗುತ್ತಿದ್ದರೆ. ಈಗ ₹2000 ದಾಟಿದೆ. ರೋಟವೇಟರ್ ಬಳಕೆಗೆ ಗಂಟೆಗೆ 800 ಇದ್ದ ದರ ಈಗ 1200ಕ್ಕೆ ತಲುಪಿದೆ. ಹೊಲ ಸಮತಟ್ಟು ಮಾಡಲು ಗಂಟೆಗೆ ₹650 ಇದ್ದ ವೆಚ್ಚ ₹ 850ಕ್ಕೆ ಏರಿಕೆಯಾಗಿದೆ. ಬಿತ್ತನೆ ಕಾರ್ಯಕ್ಕೆ ₹1000 ಇದ್ದ ವೆಚ್ಚವು ₹1500 ವರೆಗೆ ಹೆಚ್ಚಳವಾಗಿದೆ.

ವೆಚ್ಚ ತಾಳಲಾರದೇ ಅನೇಕ ರೈತರು ಮತ್ತೆ ಎತ್ತುಗಳ ಸಹಾಯದಿಂದ ಉಳುಮೆ ಮತ್ತು ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಯಾಂತ್ರೀಕರಣದ ಪರಿಣಾಮ ಗ್ರಾಮೀಣ ಪ್ರದೇಶಗಳಿಂದ ಬಹುತೇಕ ಮರೆಯಾಗಿದ್ದ ಎತ್ತುಗಳ ಕೃಷಿ ಪದ್ಧತಿ ಈಗ ಮತ್ತೆ ಜೀವಂತವಾಗುತ್ತಿದೆ.

ಟ್ರ್ಯಾಕ್ಟರ್ ಬಳಸಿ ಒಂದು ಎಕರೆ ಭೂಮಿ ಉಳುಮೆ ಮಾಡಲು ಸಾವಿರಾರು ವೆಚ್ಚವಾಗುತ್ತದೆ. ಆದರೆ ಎತ್ತುಗಳ ಸಹಾಯದಿಂದ ಅದೇ ಕೆಲಸ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದು. ಸಮಯ ಸ್ವಲ್ಪ ಹೆಚ್ಚು ಬೇಕಾದರೂ ವೆಚ್ಚ ಕಡಿಮೆಯಾಗುವುದರ ಜತೆಗೆ ಮಣ್ಣಿನ ಸಹಜ ರಚನೆ ಮತ್ತು ಫಲವತ್ತತೆ ಉಳಿಯುತ್ತದೆ. ರಾಸಾಯನಿಕ ಬಳಕೆಯಿಂದ ಹಾನಿಗೊಳಗಾಗುತ್ತಿರುವ ಮಣ್ಣಿಗೆ ಸಾಂಪ್ರದಾಯಿಕ ಕೃಷಿ ಪದ್ಧತಿ ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.


ಇಂಧನ ದರ ಏರಿಕೆಯ ಪರಿಣಾಮ ಕೃಷಿ ಕ್ಷೇತ್ರದ ಮೇಲೆ ನೇರವಾಗಿ ಬೀಳುತ್ತಿರುವುದರಿಂದ ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ಸಹಾಯಧನ, ಡೀಸೆಲ್ ಸಬ್ಸಿಡಿ, ರೈತರಿಗೆ ವಿಶೇಷ ಇಂಧನ ರಿಯಾಯಿತಿ ಹಾಗೂ ಕೃಷಿ ಯಾಂತ್ರೀಕರಣ ಯೋಜನೆಗಳ ಅನುದಾನ ಹೆಚ್ಚಿಸುವಂತೆ ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುಂಗಾರು ಹಂಗಾಮಿನ ಆರಂಭದಲ್ಲೇ ವೆಚ್ಚದ ಹೊರೆ ಹೆಚ್ಚಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು, ಕೃಷಿ ಉಳಿಸಿಕೊಳ್ಳಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಗ್ರಾಮೀಣ ಭಾಗಗಳಲ್ಲಿ ಕೇಳಿಬರುತ್ತಿದೆ.

ಇಂಧನ ದರ ಏರಿಕೆಯಿಂದ ಕೃಷಿ ಸಂಪೂರ್ಣವಾಗಿ ದುಬಾರಿಯಾಗಿದೆ. ಯಂತ್ರೋಪಕರಣಗಳ ಬಾಡಿಗೆ ರೈತರ ಕೈಗೆಟುಕದಂತಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ರೈತರು ಮತ್ತೆ ಎತ್ತುಗಳ ಕೃಷಿಯತ್ತ ಮರಳುತ್ತಿದ್ದಾರೆ. ಸರ್ಕಾರ ಕೃಷಿ ಯಂತ್ರೋಪಕರಣಗಳ ಬಾಡಿಗೆಗೆ ವಿಶೇಷ ಸಹಾಯಧನ ಹಾಗೂ ರಿಯಾಯಿತಿ ನೀಡಬೇಕು ಎಂದು ರೈತ ಚಂದುಸಾಬ್‌ ನದಾಫ ತಿಳಿಸಿದ್ದಾರೆ.

ಇಂಧನ ದರ ಏರಿಕೆಯಿಂದ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಉಳುಮೆ, ಬಿತ್ತನೆ, ಸಿಂಪಡಣೆ, ಕೊಯ್ಲು ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಹೆಚ್ಚುವರಿ ಹಣ ಖರ್ಚಾಗುತ್ತಿದೆ. ಆದರೆ ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ. ರೈತರು ಎರಡು ಕಡೆಗಳಿಂದಲೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಕೃಷಿ ಚಟುವಟಿಕೆಗಳಿಗೆ ವಿಶೇಷ ರಿಯಾಯಿತಿ ನೀಡಬೇಕು ಎಂದು ರೈತ ಸಂತೋಷ ಪೂಜಾರಿ ತಿಳಿಸಿದ್ದಾರೆ.