ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸುವುದರಿಂದ ಅವರ ಶಾಲಾ ಹಾಜರಾತಿ ಹೆಚ್ಚಾಗುವುದಲ್ಲದೆ, ಶಿಕ್ಷಣದ ಮೇಲಿನ ಆಸಕ್ತಿ ಮತ್ತಷ್ಟು ವೃದ್ಧಿಯಾಗುತ್ತದೆ.
ಕುಕನೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶೈಕ್ಷಣಿಕ ಪ್ರಗತಿಗೆ ಅನುಕೂಲ ಆಗಲಿ ಎಂದು ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಈ ಹಿಂದೆ ಸೈಕಲ್ ವಿತರಣೆ ಮಾಡಿದರು. ಆ ಮಾದರಿಯಲ್ಲಿ ನಾನು ಸಹ ಗ್ರಾಮೀಣ ಮಕ್ಕಳಿಗೆ ಅನುಕೂಲ ಆಗಲಿ ಎಂದು ಸ್ವಂತ ಖರ್ಚಿನಲ್ಲಿ ಸೈಕಲ್ ವಿತರಣೆ ಮಾಡಿದ್ದೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್ ಹೇಳಿದರು.
ತಾಲೂಕಿನ ಸೋಂಪುರ ಗ್ರಾಮದ ಶ್ರೀಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಶಿಕ್ಷಣವು ವ್ಯಕ್ತಿಯ ಬದುಕನ್ನು ರೂಪಿಸುವ ಅತ್ಯಂತ ಶಕ್ತಿಯುತ ಸಾಧನವಾಗಿದ್ದು, ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲಆಧಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸಬೇಕು. ಸರ್ಕಾರ ಹಾಗೂ ಸಮಾಜದಿಂದ ದೊರೆಯುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದರು.ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಿಸುವುದರಿಂದ ಅವರ ಶಾಲಾ ಹಾಜರಾತಿ ಹೆಚ್ಚಾಗುವುದಲ್ಲದೆ, ಶಿಕ್ಷಣದ ಮೇಲಿನ ಆಸಕ್ತಿ ಮತ್ತಷ್ಟು ವೃದ್ಧಿಯಾಗುತ್ತದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಿದ್ದು, ಶಾಲೆಗಳು ಜ್ಞಾನ ದೇಗುಲಗಳಾಗಿವೆ. ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೈಕಲ್ ವಿತರಿಸಿ ಲಕ್ಷಾಂತರ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾದರು. ಆ ನಿಟ್ಟಿನಲ್ಲಿ ನಾನು ಸಹ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿ ಎಂದು ಅವರ ಮಾದರಿಯಲ್ಲಿ ಸೈಕಲ್ ವಿತರಿಸಿದ್ದೇನೆ ಎಂದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ನೋಟ್‌ಬುಕ್ ನೀಡಲಾಯಿತು. ಶಾಲೆ ಮುಖ್ಯೋಪಾಧ್ಯಾಯರಾಗಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಬರುದ್ದೀನ್ ನೂರಬಾಷ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಮುತ್ತಯ್ಯ ಕಳ್ಳಿಮಠ, ಸೋಮಶೇಖರಗೌಡ ಸೋಂಪುರ, ಕೆ.ಬಿ. ನಾಯ್ಕರ, ಶರಣಪ್ಪ ಕೋಳೂರ, ಶರಣಪ್ಪ ಅರಕೇರಿ, ನಿಜಾಮುದ್ದೀನ್ ನದಾಫ್, ಚನ್ನಪ್ಪ ಹಣವಾಳ, ಸಿದ್ದಪ್ಪ ಮಾಸ್ಟರ್ ಸಜ್ಜನ, ಮುಖ್ಯೋಪಾಧ್ಯಾಯ ಆರ್.ಬಿ.ಅಬ್ಬಿಗೇರಿ, ಯರೇಹಂಚಿನಾಳ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಟಿ.ಅಂಜನಪ್ಪ, ಕರಿಯಪ್ಪ ಹಳ್ಳಿಕೇರಿ, ವಿರೂಪಾಕ್ಷಪ್ಪ ಅಬ್ಬಿಗೇರಿ, ನಾಗರಾಜ ಉಮಚಿಗಿ, ಶರಣಪ್ಪಗೌಡ ಪಾಟೀಲ್ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗ,ಪೋಷಕರು ಹಾಗೂ ವಿದ್ಯಾರ್ಥಿಗಳಿದ್ದರು.