ಪಟ್ಟಣದ ಮುರಿನಕಟ್ಟೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ನೂತನ ಕಟ್ಟೆಯನ್ನು ಧ್ವಂಸ ಮಾಡಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಮತ್ತು ಕಟ್ಟೆ ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಜೂ. 5 ರಂದು ಮಧ್ಯಾಹ್ನ ಹಿಂದೂ ಸಂಘಟನೆಗಳ ಒಕ್ಕೂಟ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.

ಭಟ್ಕಳದಲ್ಲಿ ಹಿಂದೂಗಳಿಂದ ಸ್ವಯಂ ಪ್ರೇರಿತ ಬಂದ್ ಸಾಧ್ಯತೆ: ಭಟ್ಕಳದಲ್ಲಿ ಬಿಗು ಬಂದೋಬಸ್ತ್‌

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮುರಿನಕಟ್ಟೆಯಲ್ಲಿ ಇತ್ತೀಚೆಗೆ ನಿರ್ಮಿಸಲಾದ ನೂತನ ಕಟ್ಟೆಯನ್ನು ಧ್ವಂಸ ಮಾಡಿರುವ ಕೃತ್ಯವನ್ನು ತೀವ್ರವಾಗಿ ಖಂಡಿಸಿ ಮತ್ತು ಕಟ್ಟೆ ಧ್ವಂಸಗೊಳಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಜೂ. 5 ರಂದು ಮಧ್ಯಾಹ್ನ ಹಿಂದೂ ಸಂಘಟನೆಗಳ ಒಕ್ಕೂಟ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.

ಮಧ್ಯಾಹ್ನ 3ರಿಂದ ಪಟ್ಟಣದ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಹಿಂದೂ ಸಂಘಟನೆಗಳ ಒಕ್ಕೂಟ ಕರೆಯ ಮೇರೆಗೆ ಪಟ್ಟಣದಲ್ಲಿ ಹಿಂದೂಗಳ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತ ಬಂದ್ ಆಗುವ ಸಾಧ್ಯತೆ ಇದೆ. ಈಗಾಗಲೇ ತಾಲ್ಲೂಕಿನ 16 ಗ್ರಾಪಂ ವ್ಯಾಪ್ತಿಯಲ್ಲೂ ಸಹ ಹಿಂದೂ ಸಂಘಟನೆಗಳ ಒಕ್ಕೂಟದವರು ಭೇಟಿ ನೀಡಿ ಕಟ್ಟೆ ಧ್ವಂಸ ಖಂಡಿಸಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮುರಿನಕಟ್ಟೆ ಮರುನಿರ್ಮಾಣ ಮಾಡುವುದು. ಕಟ್ಟೆ ಧ್ವಂಸ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು. ಮುಂದೆ ಹೀಗಾಗದಂತೆ ನಿಗಾವಹಿಸಬೇಕೆನ್ನುವುದು ಹಿಂದೂ ಸಂಘಟನೆಗಳ ಒಕ್ಕೂಟದ ಆಗ್ರಹವಾಗಿದೆ. ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಭಾಗದಿಂದ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದೆ. ಪ್ರತಿಭಟನೆಯ ಹಿನ್ನೆಲೆ ಮುರಿನಕಟ್ಟೆ ಪ್ರದೇಶ ಮತ್ತು ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಬಂದೋಬಸ್ತ್‌ಗಾಗಿ ಬೇರೆ ಬೇರೆ ಪ್ರದೇಶದ ಪೊಲೀಸ್ ಅಧಿಕಾರಿಗಳು, ಪೊಲೀಸರನ್ನು ಕರೆಯಿಸಲಾಗಿದೆ.

ಹೆಚ್ಚಿನ ಜನರು ಸೇರುವ ನಿರೀಕ್ಷೆ ಇದೆ ಎಂದು ವಿಶ್ವಹಿಂದೂ ಪರಿಷತ ಅಧ್ಯಕ್ಷ ರಾಮಕೃಷ್ಣ ನಾಯ್ಕ ಮತ್ತು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಯಂತ ನಾಯ್ಕ ತಿಳಿಸಿದ್ದಾರೆ. ಭಟ್ಕಳ: ಮದ್ಯ ಮಾರಾಟ ನಿಷೇಧ

ಮುರಿನಕಟ್ಟೆ ವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟಣೆಗಳು ಜೂ.5ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು, ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೂ ಭಟ್ಕಳ ತಾಲೂಕಿನಾದ್ಯಂತ ಎಲ್ಲಾ ರೀತಿಯ ಮದ್ಯದ ಅಂಗಡಿ ಮತ್ತು ಬಾರ್‌ಗಳನ್ನು ಬಂದ್ ಮಾಡಿ, ಮದ್ಯ ಸಾಗಾಟ ಹಾಗೂ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.