ಬೆಳ್ತಂಗಡಿ: ಕೃಷಿ ಕಾರ್ಯಗಳಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಖ್ಯ. ಮಿಶ್ರಬೆಳೆಗಳ ಬಗ್ಗೆಯೂ ಕೃಷಿಕರ ಒಲವು ಇರಬೇಕು. ಇದಕ್ಕೆ ಸಹಕಾರ ಸಂಘಗಳು ರೈತರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕ ಹರೀಶ ಪೂಂಜ ಹೇಳಿದರು. ಅಳದಂಗಡಿ ಕಟ್ಟೂರು ಶಂಕರ ಭಟ್ ಅವರ ತೋಟದ ವಠಾರದಲ್ಲಿ ಭಾನುವಾರ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಸಂಭ್ರಮ 2026ರ ಚಾಲನೆಯೊಂದಿಗೆ ನಡೆದ ಕಾಳು ಮೆಣಸು ಮತ್ತು ಕಾಫಿ ಬೆಳೆಯ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಕೃಷಿಕರು ಚಂಚಲತೆಯ ಸ್ವಭಾವವನ್ನು ರೂಡಿಸಿಕೊಂಡಿದ್ದಾರೆ. ಭತ್ತದಿಂದ ಅಡಕೆಗೆ ಅಲ್ಲಿಂದ ವೆನಿಲ್ಲಾಕ್ಕೆ ಬಳಿಕ ರಬ್ಬರಿಗೆ ಹೀಗೆ ಬಗೆಬಗೆಯ ಕೃಷಿಯತ್ತ ವಾಲಿದ್ದೇವೆ. ಏನಿದ್ದರೂ ಇಂದಿನ ಸ್ಥಿತಿಯಲ್ಲಿ ಪರ್ಯಾಯ ಬೆಳೆಗಳ ಬಗ್ಗೆ ಪ್ರಯತ್ನಿಸುವುದು ಅನಿವಾರ್ಯವಾಗಿದೆ. ತಾಲೂಕಿನಲ್ಲಿನ ಸಹಕಾರ ಭಾರತಿ ಬೆಂಬಲಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಇಂತಹ ಕಾರ್ಯಗಳಿಗೆ ಸದಾ ಬೆಂಬಲ ನೀಡಲಿವೆ ಎಂದರು.
ದ.ಕ.ಜಿ.ಕೇಂ.ಸ.ಬ್ಯಾಂಕ್ ನಿರ್ದೇಶಕ ಕುಶಲಪ್ಪ ಗೌಡ ಸಂಘದ ಸುವರ್ಣ ಸಂಭ್ರಮದ ಲೋಗೋವನ್ನು ಅನಾವರಣಗೊಳಿಸಿದರು. ಅತಿಥಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ. ಇದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಹಿರಿಯ ನಿವೃತ್ತ ವಿಜ್ಞಾನಿ ಡಾ. ವೇಣುಗೋಪಾಲ್ ಅವರು ಕಾಳುಮೆಣಸು ನಾಟಿ, ಪೋಷಣೆ, ರೋಗ ನಿರ್ವಹಣೆ ಬಗ್ಗೆ, ಕಾಳುಮೆಣಸು-ಕಾಫಿಬೆಳೆಗಾರ ಅಜಿತ್ ಪ್ರಸಾದ್ ರೈ ಕಾರ್ಯತಡಿ ಅವರು ದ.ಕ.ಜಿಲ್ಲೆಯಲ್ಲಿ ಅಡಿಕೆಗೆ ಪರ್ಯಾಯ ಹಾಗೂ ಮಿಶ್ರ ಬೆಳೆಯಾಗಿ ಲಾಭದಾಯಕ ಕಾಫಿ ಕೃಷಿ ಕುರಿತು, ಪ್ರಗತಿಪರ ಕೃಷಿಕ ಅನಂತಕೃಷ್ಣ ಪಳ್ಳತ್ತಡ್ಕ ಅವರು ನೀರಾವರಿ, ಅಟೋಮೇಟಿಕ್ ಇರಿಗೇಷನ್ ಮತ್ತು ಫರ್ಟಿಗೇಷನ್ ಸಿಸ್ಟಂ ವಿಚಾರವಾಗಿ ಮಾಹಿತಿ ನೀಡಿದರು.ಪ್ರಗತಿಪರ ಕೃಷಿಕ ಶಂಕರ ಭಟ್, ಸಂಘದ ಉಪಾಧ್ಯಕ್ಷ ಜನಾರ್ದನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀರಾ, ಆಡಳಿತ ಮಂಡಳಿ ನಿರ್ದೇಶಕರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಸ್ವಾಗತಿಸಿದರು. ಕಲಾ ಸಂಘಟಕ ವಿಜಯ ಕುಮಾರ್ ನಾವರ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸದಸ್ಯರಿಗೆ ಉಚಿತವಾಗಿ ಕಾಫಿಗಿಡಗಳನ್ನು ವಿತರಿಸಲಾಯಿತು.