ಗದಗ: 2026- 27ರ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೆಳೆ ನಷ್ಟದಿಂದ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರೈತ ಸುರಕ್ಷಾ ಪ್ರದಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅರ್ಹ ರೈತರ ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ನಿರ್ದೇಶನ ನೀಡಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಯೋಜನೆ ಕುರಿತು ಜಾಗೃತಿ ಮೂಡಿಸಿ ನೋಂದಣಿಗೆ ಕ್ರಮ ವಹಿಸಬೇಕೆಂದರು.
ಹವಾಮಾನ ವೈಪರೀತ್ಯ, ಅತಿವೃಷ್ಟಿ ಅನಾವೃಷ್ಟಿ, ಗಾಳಿ, ಮಳೆ, ಪ್ರವಾಹ ಸೇರಿದಂತೆ ವಿವಿಧ ಪ್ರಕೃತಿ ವಿಕೋಪಗಳಿಂದ ಬೆಳೆಹಾನಿಗೊಳಗಾದ ಸಂದರ್ಭದಲ್ಲಿ ರೈತರಿಗೆ ಸೂಕ್ತ ಪರಿಹಾರ ದೊರೆಯಲು ಬೆಳೆ ಕಟಾವು ಪ್ರಯೋಗಗಳನ್ನು ಪಾರದರ್ಶಕವಾಗಿ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಇಂಡಸ್ ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿ ಅನುಷ್ಠಾನ ವಿಮಾ ಸಂಸ್ಥೆಯಾಗಿ ಆಯ್ಕೆಯಾಗಿದೆ. ಕಂಪನಿಯ ಪ್ರತಿನಿಧಿಗಳು ಪ್ರತಿ ತಾಲೂಕು ಕಚೇರಿಗೆ ಸರಿಯಾಗಿ ಕೆಲಸ ಮಾಡುವ ಪ್ರತಿನಿಧಿಗಳನ್ನು ನಿಯೋಜನೆ ಮಾಡಬೇಕು ಎಂದರು. ಆಸಕ್ತ ರೈತರು ಬೆಳೆ ವಿಮೆ ತುಂಬಲು ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಬೆಳೆವಿಮೆ ತುಂಬುವಂತಾಗಬೇಕು.
ಬೆಳೆವಿಮೆ ಮಾಡಿಸುವ ರೈತರು ಪ್ರುಟ್ ಎಫ್ಐಡಿ ಹೊಂದಿರುವುದು ಕಡ್ಡಾಯ. ರೈತರು ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಕಂದಾಯ ರಶೀದಿಯನ್ನು ಸಂಬಂಧಿಸಿದ ಬ್ಯಾಂಕ್, ಹತ್ತಿರದ ಸಾರ್ವಜನಿಕ ಸೇವಾಕೇಂದ್ರ ಗ್ರಾಮ ಒನ್ ಕೇಂದ್ರಗಳಲ್ಲಿ ನೀಡಿ ಸಂರಕ್ಷಣೆ ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಬೆಳೆವಾರು ವಿಮಾ ಕಂತು ಪಾವತಿ ಕುರಿತು ಮಾಹಿತಿ ನೀಡಿದರು. ಬೆಳೆಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಒಂದು ವೇಳೆ ಬೆಳೆಸಾಲ ಪಡೆದ ರೈತರು ಈ ಯೋಜನೆಯಡಿ ಭಾಗವಹಿಸದೇ ಇದ್ದಲ್ಲಿ ಈ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ಪತ್ರ ನೀಡಿದಲ್ಲಿ ಅಂತಹ ರೈತರನ್ನು ಈ ಯೋಜನೆಯಿಂದ ಕೈಬಿಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರದಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷ್ ಎಂ.ವಿ., ಡಿಡಿಎಲ್ ಆರ್. ರುದ್ರಣ್ಣಗೌಡ, ಕೃಷಿ ಇಲಾಖೆಯ ಉಪನಿರ್ದೇಶಕಿ ಸ್ಫೂರ್ತಿ, ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಯಾವ ಬೆಳೆಗಳಿಗೆ ವಿಮೆ?ಜು. 15 ಹೆಸರು(ಮಳೆಯಾಶ್ರಿತ), ಹತ್ತಿ( ಮಳೆ ಆಶ್ರಿತ ಮತ್ತು ನೀರಾವರಿ) ಬೆಳೆಗಳಿಗೆ, ಜು. 31 ಗೋವಿನಜೋಳ(ಮಳೆ ಮತ್ತು ನೀರಾವರಿ), ಸಜ್ಜೆ(ಮಳೆ ಆಶ್ರಿತ), ತೊಗರಿ(ಮಳೆಯಾಶ್ರಿತ), ಶೇಂಗಾ(ಮಳೆ ಮತ್ತು ನೀರಾವರಿ), ಭತ್ತ(ನೀರಾವರಿ) ಆ. 14 ಸೂರ್ಯಕಾಂತಿ(ಮಳೆ ಮತ್ತು ನೀರಾವರಿ).