ಮುಂಡರಗಿ: ವಿದ್ಯಾರ್ಥಿ ಜೀವನ ಯಾವಾಗಲೂ ಕಷ್ಟದಾಯಕ. ಆ ಕಷ್ಟವನ್ನು ಗೆದ್ದು, ಆರೋಗ್ಯ ಮತ್ತು ಮನಸ್ಸನ್ನು ಸದೃಢವಾಗಿ ಇಟ್ಟುಕೊಂಡರೆ ಜೀವನ ಬಂಗಾರವಾಗುತ್ತದೆ ಎಂದು ಡಂಬಳದ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ತಿಳಿಸಿದರು.ಡಂಬಳದ ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ವಾರ್ಷಿಕೋತ್ಸವ, ಕೊನೆಯ ವರ್ಷದ ತರಬೇತುದಾರ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿಸಲು ಸರಳತೆ ಮತ್ತು ಸುಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬೆಳೆದು ಎಷ್ಟೇ ದೊಡ್ಡ ಹುದ್ದೆಯನ್ನೇರಿದರೂ ಶಿಕ್ಷಣ ಪಡೆದ ಶಾಲಾ- ಕಾಲೇಜು ಹಾಗೂ ಶಿಕ್ಷಣ ನೀಡಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಹೆತ್ತ ತಂದೆ- ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳ ಸೇವೆಯಲ್ಲಿ ಸಾರ್ಥಕವಾದ ಬದುಕನ್ನು ನಡೆಸಬೇಕು ಎಂದರು.ಪರಿಸರವಾದಿ ಪ್ರೊ. ಸಿ.ಎಸ್. ಅರಸನಾಳ ಮಾತನಾಡಿ, ವಿದ್ಯಾರ್ಥಿಗಳು ಹಣ ಗಳಿಕೆಯೇ ಮುಖ್ಯ ಉದ್ದೇಶವನ್ನಾಗಿ ಇಟ್ಟುಕೊಳ್ಳದೆ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಈ ಭೂಮಿಯ ಋಣವನ್ನು ಗಿಡಮರಗಳನ್ನು ಹಚ್ಚಿ ಬೆಳೆಸುವುದರ ಮೂಲಕ ತೀರಿಸಬೇಕು. ಮರಗಿಡಗಳನ್ನು ಹಚ್ಚುವುದು ಕೇವಲ ಫ್ಯಾಷನ್ ಆಗಬಾರದು. ಅದು ಪ್ರಕೃತಿಗೆ ನಾವು ಕೊಡುವ ಕೊಡುಗೆ ಆಗಬೇಕು ಎಂದರು.

ಡಂಬಳ ಭಾಗದ ಅರಣ್ಯಧಿಕಾರಿ ಎಂ.ಪಿ. ಮಡಿವಾಳರ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ- ಮರಗಳನ್ನು ನೆಟ್ಟು ಬೆಳೆಸುವುದು ಕೇವಲ ಅರಣ್ಯ ಇಲಾಖೆ ಮಾಡಿದರೆ ಸಾಲದು. ಸಾರ್ವಜನಿಕರೂ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ಸಂಸ್ಥೆಯ ಹಿರಿಯ ವಿದ್ಯಾರ್ಥಿ ನಿತ್ಯಾನಂದ ಮಾಶ್ಯಾಳ ಮಾತನಾಡಿದರು. ಪ್ರಾ. ಮಹೇಶಗೌಡ ಗೌಡರ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್. ಕುಂಬಾರ ಸ್ವಾಗತಿಸಿದರು. ಆರ್.ವಿ. ಘಳಗಿ ಪ್ರಾಸ್ತಾವಿಸಿಕವಾಗಿ ಮಾತನಾಡಿದರು. ಆರ್.ಜಿ. ಕೊರ್ಲಹಳ್ಳಿ ನಿರೂಪಿಸಿದರು. ಐ.ಬಿ. ದಾಸರ ವಂದಿಸಿದರು.