ಹೊಸಪೇಟೆ: ಪ್ರತಿಯೊಂದು ಸಾಮಾಜಿಕ ಪಿಡುಗು ಹೊಡೆದೋಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ನಮ್ಮ ಜಿಲ್ಲೆಗೆ ಉತ್ತಮ ಸಂಶೋಧಕರನ್ನು ಕೊಟ್ಟಿರುವುದು ಹೆಮ್ಮೆಯ ವಿಷಯ ಎಂದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯ ಸಭಾಂಗಣದಲ್ಲಿ ಒನಕೆ ಓಬವ್ವ ಅಧ್ಯಯನ ಪೀಠದ ವತಿಯಿಂದ ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ -12 ಪುಸ್ತಕಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಾಲ್ಮೀಕಿ ಅಧ್ಯಯನ ಪೀಠ, ಒನಕೆ ಓಬವ್ವ ಪೀಠ, ದಲಿತ ಅಧ್ಯಯನ ಪೀಠ, ಮುಂತಾದ ಪೀಠಗಳ ವತಿಯಿಂದ ಶೋಷಿತ ವರ್ಗಕ್ಕೆ ತಿಳಿವಳಿಕೆ ನೀಡುವ, ಉನ್ನತ ಶಿಕ್ಷಣ ನೀಡುವ, ಉತ್ತಮ ಸಂಶೋಧಕರನ್ನು, ಮಾರ್ಗದರ್ಶಕರನ್ನು ರೂಪಿಸುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯವು ಮಾಡುತ್ತಿದೆ ಎಂದು ಹೇಳಿದರು.

ಹಂಪಿ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ದೇಶವು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಸಮಾಜದ ಆಳಕ್ಕೆ ಇಳಿದು ನೋಡಿದಾಗ ಮಹಿಳಾ ವಲಯ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಶೋಷಣೆಗೆ ಒಳಗಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೀಗೆ ಶೋಷಣೆಗೆ ಒಳಗಾಗುತ್ತಿರುವ, ಬದುಕನ್ನು ದಿಟ್ಟತನದಿಂದ ಎದುರಿಸುತ್ತಿರುವ, ಬದುಕಿನ ಹಾದಿಯಲ್ಲಿ ಬೆಂಕಿಯ ಮೇಲೆ ನಡೆದುಕೊಂಡು ಬಂದಂತಹ ಅನೇಕ ಮಹಿಳಾ ಗುಂಪುಗಳು ಇನ್ನೂ ಕೂಡ ನಮ್ಮ ನಡುವೆ ಇವೆ. ಇಂತಹ ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು ಮಹಿಳೆಯರ ಬಗ್ಗೆ ಕೃತಿಗಳನ್ನು ರಚಿಸಿ ಅವರ ಮೇಲೆ ಬೆಳಕನ್ನು ಚೆಲ್ಲುವಂತಹ ಕೆಲಸವನ್ನು ಒನಕೆ ಓಬವ್ವ ಪೀಠ ಕೈಗೊಂಡಿದೆ ಎಂದರು.

ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ. ಪಿ. ಮಹಾದೇವಯ್ಯ ಉಪಸ್ಥಿತರಿದ್ದರು. ಒನಕೆ ಓಬವ್ವ ಅಧ್ಯಯನ ಪೀಠದ ಸಂಚಾಲಕ ಮತ್ತು ಹಿರಿಯ ಪ್ರಾಧ್ಯಾಪಕ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹರಾಜು ಎಸ್. ವಂದಿಸಿದರು. ಡಾ. ಮಣಿಕಂಠ ಹಂಗಳ ಕಾರ್ಯಕ್ರಮ ನಿರೂಪಿಸಿದರು.