ಕನ್ನಡಪ್ರಭ ವಾರ್ತೆ ಸಿದ್ದಾಪುರ
ಭಾರತ ಚುನಾವಣಾ ಆಯೋಗದ ಆದೇಶದಂತೆ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೂ. 30ರಿಂದ ಅ.೭ ರ ವರೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಯಲಿದೆ ಎಂದು ಶಿರಸಿ ಉಪವಿಭಾಗದ ಮತದಾರರ ನೋಂದಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಚಂದ್ರಶೇಖರ್ ಜಿ.ಆರ್. ತಿಳಿಸಿದರು. ತಾಲೂಕು ಆಡಳಿತ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.ಇದು ಸಂವಿಧಾನಾತ್ಮಕ ಕಾಯ್ದೆ ಪ್ರಕಾರ ಮಾಡಬೇಕಾದ ಕಾರ್ಯವಾಗಿದೆ. ಸಾರ್ವಜನಿಕರು ಇದನ್ನು ನಕಾರಾತ್ಮಕವಾಗಿ ನೋಡಬಾರದು. ದೋಷರಹಿತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾರ್ವಜನಿಕರ ಸಕ್ರಿಯ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದೆ. ಪ್ರಕ್ರಿಯೆಯ ಸಂರ್ಭದಲ್ಲಿ ಯಾರದ್ದಾದರೂ ಹೆಸರು ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದರೆ, ಅವರು ಸರಿಯಾದ ದಾಖಲೆಗಳನ್ನು ಒದಗಿಸಿ ಪುನಃ ಹೆಸರು ಸೇರ್ಪಡೆ ಮಾಡಲು ಮುಕ್ತ ಅವಕಾಶವಿರುತ್ತದೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಶಿರಸಿ, ಸಿದ್ದಾಪುರ ತಾಲೂಕು ಹೊಂದಿರುವ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಕಾರ್ಯನಿರ್ವಹಣೆಗಾಗಿ ೨ ಸಹಾಯಕ ಮತದಾರರ ನೋಂದಣಾಧಿಕಾರಿಗಳು, ೨೬೬ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ೨೬ ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೇ ಈ ಪ್ರಕ್ರಿಯೆಯ ಉಸ್ತುವಾರಿಗಾಗಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು, ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳನ್ನು ಹಾಗೂ ಹೋಬಳಿ ಮಟ್ಟದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಸಹ ತಮ್ಮ ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಕ ಮಾಡಿಕೊಂಡಿವೆ. ಸಿದ್ದಾಪುರ ತಾಲೂಕಿನಲ್ಲಿ ಒಟ್ಟು ೮೬,೨೩೬ ಮತದಾರರಿದ್ದು, ಶೇ. ೯೭.೧೨ ರಷ್ಟು ಮತದಾರರ ವಿವರಗಳನ್ನು ೨೦೦೨ ರ ಮತದಾರರ ಪಟ್ಟಿಯ ವಿವರದೊಂದಿಗೆ ಹೋಲಿಸಿ ಖಚಿತಪಡಿಸಿಕೊಳ್ಳಲಾಗಿದೆ ಎಂದರು.ಮನೆ-ಮನೆ ಭೇಟಿ ಪ್ರಕ್ರಿಯೆ:
ಜೂ. ೩೦ರಿಂದ ಜು. ೨೯ ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎರಡು ಎನ್ಯುಮರೇಷನ್ ಫಾರಂಗಳನ್ನು ನೀಡಲಿದ್ದಾರೆ. ಮತದಾರರು ಈ ಎರಡೂ ಎನ್ಯುಮರೇಷನ್ ಪ್ರತಿಗಳನ್ನು ಭರ್ತಿ ಮಾಡಿ ಮತದಾರ ಅಥವಾ ಅವರ ಕುಟುಂಬದ ಸದಸ್ಯರು ಕಡ್ಡಾಯವಾಗಿ ಸಹಿ ಮಾಡಬೇಕಿರುತ್ತದೆ. ಭರ್ತಿ ಮಾಡಿದ ಪ್ರತಿಗಳಲ್ಲಿ ಒಂದನ್ನು ಮತಗಟ್ಟೆ ಮಟ್ಟದ ಅಧಿಕಾರಿಗೆ ನೀಡಬೇಕು ಹಾಗೂ ಇನ್ನೊಂದರ ಮೇಲೆ ಮತಗಟ್ಟೆ ಮಟ್ಟದ ಅಧಿಕಾರಿಯ ಸಹಿ ಪಡೆದು ತಮ್ಮ ಬಳಿಯೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ವಿವರಣೆ ನೀಡಿದರು.
ಸಾರ್ವಜನಿಕರು ಈ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡಬೇಕಾಗಿ ಮತದಾರರ ನೋಂದಣಾಧಿಕಾರಿಗಳು ವಿನಂತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಭಾರ ತಹಸೀಲ್ದಾರ್ ರಮೇಶ ಹೆಗಡೆ ಉಪಸ್ಥಿತರಿದ್ದರು.