ಸಿ.ಕೆ. ನಾಗರಾಜ

ಹೊಸಪೇಟೆ: ಮುಂಗಾರು ಮಳೆ ಕೈಕೊಟ್ಟಿದ್ದು, ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಪ್ರದೇಶದಲ್ಲಿ ಮುಂಗಾರು ಆರಂಭದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವರು ಮಳೆಗಾಗಿ ಮುಗಿಲು ನೋಡುತ್ತಾ ಬಿತ್ತನೆಗಾಗಿ ಕಾಯುತ್ತಿದ್ದಾರೆ.

ಈಗಾಗಲೇ ಬಿತ್ತನೆ ಮಾಡಿದ ರೈತರು ಆತಂಕಗೊಂಡಿದ್ದಾರೆ. ಮೊಳಕೆ ಒಡೆದು ಸಸಿಯಾಗಿದ್ದು, ಈಗ ಒಣಗುತ್ತಿದೆ. ಕೆಲವರು ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ.

ಮರಿಯಮ್ಮನಹಳ್ಳಿ ಸಮೀಪದ ಹಂಪಿನಕಟ್ಟೆ ​ವೆಂಕಟಾಪುರ ಗ್ರಾಮದ ರೈತ ಮಹಿಳೆ ಲಕ್ಷ್ಮವ್ವ ಅವರು ತಮ್ಮ ಎಂಟು ಎಕರೆಯಲ್ಲಿ ನಾಲ್ಕು ಎಕರೆ ಬೆಳೆದ ಮುಸುಕಿನ ಜೋಳ ಹಾಗೂ ಜೋಳದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಟ್ಯಾಂಕರ್ ನೀರು ಹಾಯಿಸುತ್ತಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಮಳೆ ಬಿತ್ತು. ಹೀಗಾಗಿ ಲಕ್ಷ್ಮವ್ವ ಅವರು ಮುಸುಕಿನ ಜೋಳ ಹಾಗೂ ಜೋಳ ಬಿತ್ತನೆ ಮಾಡಿದ್ದರು. ಸದ್ಯ ಒಂದೂವರೆ ತಿಂಗಳ ಬೆಳೆಗಳಿವೆ. 20 ದಿನಗಳಿಂದ ಮಳೆಯಾಗದೇ ಇರುವುದರಿಂದ ಗಿಡಗಳು ಬಾಡಲಾರಂಭಿಸಿವೆ. ಬೆಳೆಗಳನ್ನು ರಕ್ಷಿಸಿಕೊಳ್ಳಲು ಬೇರೆ ದಾರಿ ಇಲ್ಲದೆ ಬಾಡಿಗೆ ನೀಡಿ, ಟ್ಯಾಂಕರ್ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಇಡೀ ಹೋಬಳಿ ವ್ಯಾಪ್ತಿಯಲ್ಲಿ ಜೋಳ, ಮುಸುಕಿನ ಜೋಳ ಬಿತ್ತಿದ ರೈತರ ಪಾಡು ಇದೇ ರೀತಿ ಆಗಿದೆ.

ಒಂದು ಎಕರೆ ಬೆಳೆಗೆ 3ರಿಂದ 4 ಟ್ಯಾಂಕರ್ ನೀರು ಬೇಕಾಗುತ್ತದೆ. ನೇರವಾಗಿ ನೀರು ಕೊಡಲು ಕನಿಷ್ಠ 5​- 6 ಟ್ಯಾಂಕರ್ ನೀರು ಬೇಕಾಗುತ್ತದೆ. ಒಂದು ಟ್ಯಾಂಕರ್ ನೀರಿನ ಬೆಲೆ ₹700ರಿಂದ ₹800 ವರೆಗೆ ಇದೆ. ಬೆಳೆ ಉಳಿಸಿಕೊಳ್ಳಲು ರೈತರು ಸಾವಿರಾರು ರು. ಖರ್ಚು ಮಾಡುತ್ತಿದ್ದಾರೆ.


ಕೆಲವೆಡೆ ಬೋರ್‌ವೆಲ್‌ನಲ್ಲೂ ಈಗ ನೀರಿಲ್ಲ. ನೀರಿನ ಬೇಡಿಕೆ ಹೆಚ್ಚಾಗಿದೆ ಎಂದು ರೈತರಾದ ದುರುಗಪ್ಪ, ವರುಣ್ ಹೇಳುತ್ತಾರೆ.

ಕಣ್ಣಾಗ ನೀರು ಬರುತ್ತಿದೆ: ಸುಮಾರು ₹70 ಸಾವಿರ ಖರ್ಚು ಮಾಡಿ 8 ಎಕರೆ ಹೊಲದಲ್ಲಿ ಎರಡು ಎಕರೆ ಜೋಳ, ಮೂರೂವರೆ ಎಕರೆ ಮುಸುಕಿನ ಜೋಳ ಬಿತ್ತನೆ ಮಾಡಿದ್ದೇವೆ. ಈಗ ಒಂದು ತಿಂಗಳ ಬೆಳೆ ಇದೆ. ಆದರೆ ಮಳೆ ಹೋಗಿ ಗಿಡಗಳು ಬಾಡಲಾರಂಭಿಸಿವೆ. ಬೆಳೆ ಬಾಡುತ್ತಿರುವುದನ್ನು ಕಂಡು ಕಣ್ಣಾಗ ನೀರು ಬರುತ್ತಿವೆ. ಟ್ಯಾಂಕರ್‌ ಮೂಲಕ ಬೆಳೆಗೆ ನೀರು ಹರಿಸುತ್ತಿದ್ದೇನೆ ಎಂದು ವೆಂಕಟಾಪುರ ಗ್ರಾಮದ ರೈತ ಮಹಿಳೆ ಲಕ್ಷ್ಮವ್ವ ಹೇಳಿದರು.