ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ, ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವಂತೆ ಆಗ್ರಹಿಸಿ ಡಿ. 8ರಂದು ಜಿಲ್ಲೆಯ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಜಿಲ್ಲೆಯಲ್ಲಿರುವ ರೈತ ಬಾಂಧವರು ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕರೆ ನೀಡಿದರು.

ಹಾವೇರಿ:ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ, ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವಂತೆ ಆಗ್ರಹಿಸಿ ಡಿ. 8ರಂದು ಜಿಲ್ಲೆಯ ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಜಿಲ್ಲೆಯಲ್ಲಿರುವ ರೈತ ಬಾಂಧವರು ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಸಹಿತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕರೆ ನೀಡಿದರು.

ಇಲ್ಲಿಯ ಜಿಲ್ಲಾಡಳಿತ ಭವನದಲ್ಲಿ ಕಳೆದ ಎಂಟು ದಿನಗಳಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಸೋಮವಾರ ತಾತ್ಕಾಲಿಕವಾಗಿ ಹಿಂಪಡೆಯುವ ಮೊದಲು, ರಾಜ್ಯ ಸರ್ಕಾರ ಹೊರಡಿಸಿರುವ 17 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುವ ಆದೇಶವನ್ನು ಬೆಂಕಿ ಹಚ್ಚಿ ಸುಟ್ಟು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಅವರು, ಒಬ್ಬ ರೈತ ಒಂದು ಎಕರೆಯಲ್ಲಿ ಬೆಳೆದ 25 ಕ್ವಿಂಟಲ್ ಪೈಕಿ ಕೇವಲ 5 ಕ್ವಿಂಟಲ್ ಮಾತ್ರ ಖರೀದಿ ಮಾಡಿದರೆ ಉಳಿದ ಮೆಕ್ಕೆಜೋಳವನ್ನು ಯಾವ ಶಾಸಕರು, ಯಾವ ಸಚಿವರ ಮನೆಗೆ ಹೋಗಿ ಸುರಿಯಬೇಕು. ಸರ್ಕಾರ ರೈತರ ಜತೆಗೆ ಚೆಲ್ಲಾಟವಾಡುತ್ತಿದೆಯಾ? ನನ್ನ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರಗಳು ರೈತರ ಒತ್ತಾಯಕ್ಕೆ ಮಣಿದು ವ್ಯವಸ್ಥಿತ ಯೋಜನೆ ರೂಪಿಸಿ ಖರೀದಿ ಮಾಡುತ್ತಿದ್ದರು. ಆದರೆ, ಜಿಲ್ಲೆಯ ಶಾಸಕರು, ಸಚಿವರು, ರಾಜ್ಯ ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿವೆ. ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರೈತರ ಜತೆಗೆ ಯಾಕೆ ಚೆಲ್ಲಾಟವಾಡಬೇಕು. ನಮ್ಮಿಂದ ವೋಟ್ ಪಡೆದು ಅಧಿಕಾರ ಮಾಡುತ್ತಿದ್ದಾರೆ. ಕಳೆದ ಎಂಟು ದಿನಗಳಿಂದ ರೈತರು ಚಳಿಯಲ್ಲಿ ಮಲಗಿದ್ದಾರೆ. ನಮ್ಮ ಹಕ್ಕು ನಾವು ಕೇಳುತ್ತಿದ್ದರೂ ಯಾರೊಬ್ಬರು ಬಂದಿಲ್ಲ. ಹೀಗಾಗಿ, ಹೋರಾಟವನ್ನು ತೀವ್ರಗೊಳಿಸಿ ಡಿ. 8ಕ್ಕೆ ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತೇವೆ. ಸಮಸ್ತ ರೈತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಸರ್ಕಾರ ನಾಮಕೇವಾಸ್ತೆ ಮೆಕ್ಕೆಜೋಳ ತೆಗೆದುಕೊಳ್ಳುವುದಾಗಿ ಹೇಳಿದೆ. ಅದರ ಆದೇಶದಲ್ಲಿ ಒಬ್ಬ ರೈತರಿಂದ 5 ಕ್ವಿಂಟಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ಹೇಳಿದೆ. ಜಿಲ್ಲೆಯಲ್ಲಿ 12 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆಯಾಗಿದೆ. ಕನಿಷ್ಠ 50 ರಿಂದ 100 ಚೀಲ ಖರೀದಿ ಮಾಡುತ್ತೇವೆ ಎಂದಿದ್ದರೆ ಒಂದರ್ಥ ಬರುತ್ತಿತ್ತು. ಹಾಗಾಗಿ ಸರ್ಕಾರದ ಆದೇಶ ಪ್ರತಿ ಸುಟ್ಟು ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಡಿ. 8ರಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ ಸಚಿವರು, ಶಾಸಕರು ಹೋಗುವುದಕ್ಕೆ ಹೋರಾಟ ತೀವ್ರಗೊಳಿಸಿ ಅಡ್ಡಿಪಡಿಸುತ್ತೇವೆ. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭದ ಜತೆಗೆ ಹೆಸ್ಕಾಂ ದುರಾಡಳಿತ, ಬೇಡ್ತಿ ವರದಾ ನದಿ ಜೋಡಣೆ ಅನುಷ್ಠಾನ ಆಗುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದರು.

ಈ ವೇಳೆ ರೈತ ಮುಖಂಡರಾದ ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ಶಂಕ್ರಣ್ಣ ಶಿರಗಂಬಿ, ಶಿವಯೋಗಿ ಹೊಸಗೌಡ್ರ, ಪ್ರಭುಗೌಡ ಪ್ಯಾಟಿ, ಗುಡ್ಡನಗೌಡ ಪ್ಯಾಟಿಗೌಡ್ರ, ರಾಜು ತರ್ಲಘಟ್ಟ, ಚೆನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ, ಸುರೇಶ ಹೊನ್ನಪ್ಪನವರ, ಆನಂದ ಮಣಕೂರ, ಶಂಭು ಮುತ್ತಗಿ, ಸೋಮಣ್ಣ ಜಡೆಗೊಂಡರ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.