ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣಗೊಳ್ಳಲಿದೆ.

ಬಳ್ಳಾರಿ: ಜ.3ರಂದು ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯ ಅನಾವರಣಗೊಳ್ಳಲಿದ್ದು, ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದರು.ನಗರದ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಸಮಾರಂಭಕ್ಕೆ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್. ರಾಜಣ್ಣ, ಸಚಿವ ಜಮೀರ್ ಅಹ್ಮದ್, ಸಂಸದ ತುಕಾರಾಂ, ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ರಾಜ್ಯದ ಜಿಲ್ಲೆಯ ಎಸ್ಟಿ ಸಮುದಾಯದ ಶಾಸಕರು ಭಾಗವಹಿಸವರು. ಈಗಾಗಲೇ ವಾಲ್ಮೀಕಿ ವೃತ್ತವನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ವಿಧಾನಸಭೆ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಮೂರು ಹಂತಗಳಲ್ಲಿ ₹84 ಕೋಟಿ ಅನುದಾನ ತರಲಾಗಿದೆ. ಇವುಗಳ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಮತ್ತೆ ₹3 ಕೋಟಿ ಅನುದಾನದ ಅಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೊಟ್ಟ ಮಾತಿನಂತೆ ಬಳ್ಳಾರಿಯನ್ನು ಸುವರ್ಣ ಬಳ್ಳಾರಿಯಾಗಿ ರೂಪಿಸುತ್ತಿದ್ದೇವೆ ಎಂದರು.

ನಗರದಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಂದಾಗಿ ಜನರಿಗೆ ಸದ್ಯಕ್ಕೆ ಅನಾನುಕೂಲ ಆಗುತ್ತಿರುವುದು ನಿಜ. ಇನ್ನು ಆರು ತಿಂಗಳು ಜನರು ಕಷ್ಟವನ್ನು ಸಹಿಸಿಕೊಳ್ಳಬೇಕು. ಈಗ ಸಾಕಷ್ಟು ಕಾಮಗಾರಿಗಳು ಮತ್ತೆ ಆರಂಭ ಆಗಲಿವೆ ಎಂದರು.

ಮೇಯರ್ ಪಿ.ಗಾದೆಪ್ಪ, ಉಪ ಮೇಯರ್ ಮುಬೀನಾಬಿ, ಪಾಲಿಕೆಯ ಆಯುಕ್ತ ಪಿ.ಮಂಜುನಾಥ, ಮಾಜಿ ಮೇಯರ್ ರಾಜೇಶ್ವರಿ, ಸದಸ್ಯರಾದ ಸುರೇಖಾ ಗೌಡ, ನೂರ್ ಮೊಹಮ್ಮದ್, ಟಿ.ವಿ.ಪ್ರಸಾದ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಸೋಮಶೇಖರ್, ಚಾನಾಳ್ ಶೇಖರ್, ಗೋನಾಳ ನಾಗಭೂಷಣ, ಯಾಳ್ಪಿ ಪಂಪನಗೌಡ, ಬಿಸಿಲಹಳ್ಳಿ ಮಂಜು, ಮಂಜು ಬೆಳ್ಳಿಗಾರ, ಶಂಕರ್, ಗೌತಮ್, ಖಾದರ್, ಬಿಆರೆಲ್ ಸೀನಾ, ಬಾಲರಾಜು, ಚರಣ್, ಅಭಿ ಇದ್ದರು.

ಇದಕ್ಕೂ ಮುನ್ನ 23ನೇ ವಾರ್ಡಿನ ಮಹಾನಂದಿಕೊಟ್ಟಂನಲ್ಲಿ ಮಹಾತ್ಮ ಗಾಂಧಿನಗರ ಯೋಜನೆ ಅಡಿ ₹2.50 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಮೂಲಕ ಚಾಲನೆ ನೀಡಲಾಯಿತು.

21ನೇ ವಾರ್ಡಿನ ಬಸವೇಶ್ವರ ನಗರದಲ್ಲಿ ಅಂದಾಜು ₹4 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ನಂತರ 15ನೇ ವಾರ್ಡಿನ ವಡ್ಡರ ಬಂಡೆಯ ಬಳಿ ಅಂದಾಜು ವೆಚ್ಚ ₹2 ಕೋಟಿಗಳಲ್ಲಿ, ಅದೇ ರೀತಿ ವಾರ್ಡ್ ಸಂಖ್ಯೆ 16ರ ಶ್ರೀರಾಂಪುರ ಕಾಲೋನಿಯಲ್ಲಿ ₹2.80 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.