ಹಾಲಸ್ವಾಮಿ ಮಠ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬಡತನ ನಿವಾರಣೆಗೆ ಶ್ರಮಿಸುತ್ತಿದೆ

ಹಗರಿಬೊಮ್ಮನಹಳ್ಳಿ: ಹಾಲಸ್ವಾಮಿ ಮಠ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಬಡತನ ನಿವಾರಣೆಗೆ ಶ್ರಮಿಸುತ್ತಿದೆ ಎಂದು ಶಾಸಕ ಕೆ.ನೇಮರಾಜ ನಾಯ್ಕ ತಿಳಿಸಿದರು.

ಪಟ್ಟಣದಲ್ಲಿ ಹಾಲಸ್ವಾಮಿದಲ್ಲಿ ಹಾಲಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಳ ಬದುಕಿನಿಂದ ನಿತ್ಯದ ಬದುಕು ಸುಧಾರಿಸುತ್ತದೆ. ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಬಿದ್ದಂತಾಗುತ್ತದೆ. ಕ್ಷೇತ್ರದ ಮಠಗಳು ಅಕ್ಷರ ಮತ್ತು ಅನ್ನ ದಾಸೋಹದ ಜತೆಗೆ ಉತ್ತಮ ಸಂಸ್ಕಾರ ನೀಡುತ್ತಿವೆ. ಕ್ಷೇತ್ರದ ಮಠಗಳ ಅಭಿವೃದ್ಧಿಗೆ ತಲಾ ₹೨೫ ಲಕ್ಷ ಅನುದಾನ ನೀಡಲಾಗುವುದು ಎಂದರು.

ಹಾಲಸಿದ್ದೇಶ್ವರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ನೂತನ ದಂಪತಿಗಳು ಹಿರಿಯರನ್ನು ಗೌರವಿಸುವ ಜತೆಗೆ ಸಾರ್ಥಕ ಬದುಕಿನ ಮಾರ್ಗ ಕಂಡುಕೊಳ್ಳಬೇಕು. ಭಕ್ತರ ಸಹಕಾರದಿಂದ ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗುತ್ತದೆ ಎಂದರು.

ಇದೇ ವೇಳೆ ೧೨ ಜೋಡಿ ವಧು-ವರರು ನೂತನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ, ನಂದಿಪುರ ಸುಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ, ಮರಿಯಮ್ಮನಹಳ್ಳಿ ಮಲ್ಲಿಕಾರ್ಜುನ ಸ್ವಾಮೀಜಿ, ಕೊಟ್ಟೂರಿನ ಸೋಮಶಂಕರ ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಗ್ರಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಗಂಗಾಧರ, ಪುರಸಭೆ ಸದಸ್ಯರಾದ ತೆಲಿಗಿ ನೆಲ್ಲು ಇಸ್ಮಾಯಿಲ್, ದೀಪಕ್ ಸಾ ಕಠಾರೆ, ಮುಖಂಡರಾದ ನಾಣ್ಯಾಪುರ ಕೃಷ್ಣಮೂರ್ತಿ, ಅಂಬಣ್ಣ, ಶ್ರೀಶೈಲ ಇತರರಿದ್ದರು. ಹಾಲಸ್ವಾಮಿ ಮಠ ಟ್ರಸ್ಟ್‌ನ ಖಾನಾವಳಿ ಬಸವರಾಜ, ಕರಿಬಸವನಗೌಡ, ಹೊಟೇಲ್ ಸಿದ್ದರಾಜು, ಉಮಾಪತಿ, ಬಿ.ಜಿ.ಬಡಿಗೇರ ನಿರ್ವಹಿಸಿದರು.

ಹಗರಿಬೊಮ್ಮನಹಳ್ಳಿ ಪಟ್ಟಣದ ಹಾಲಸ್ವಾಮಿ ಮಠದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ೧೨ ಜೋಡಿ ವಧುವರರು ನೂತನ ದಾಂಪತ್ಯಕ್ಕೆ ಕಾಲಿರಿಸಿದರು.