ಸಾರಾಂಶ
ತಂದೆಯ ಹೆಸರಿನಲ್ಲಿ ಅವರ ಪುಣ್ಯ ಸ್ಮರಣೆ ದಿನದಂದು ಅಪ್ಪ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಗೀತ ಡಾ.ಹಂಸಲೇಖ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ತಂದೆಯ ಹೆಸರಿನಲ್ಲಿ ಅವರ ಪುಣ್ಯ ಸ್ಮರಣೆ ದಿನದಂದು ಅಪ್ಪ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಗೀತ ಡಾ.ಹಂಸಲೇಖ ಹೇಳಿದರು.ತಾಲೂಕಿನ ಬೋರಗಿಯ ನಬಿರೋಶನ್ ಪ್ರಕಾಶನ ವತಿಯಿಂದ ದಿ.ಖತಾಲಸಾಬ್ ಆಲಗೂರ ಅವರ ೨ನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ಬೆಂಗಳೂರಿನ ಕೋರಮಂಗಲದ ಕೆ.ಎಸ್.ಆರ್.ಪಿ ೪ನೇ ಬೆಟಾಲಿಯನ್‌ನಲ್ಲಿ ಹಮ್ಮಿಕೊಂಡ ಅಪ್ಪ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಸಾರ ನೌಕೆಯ ನಾವಿಕನಾಗಿ, ಕುಟುಂಬದ ರಕ್ಷಕನಾಗಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕನಾಗಿ, ಕುಟುಂಬಕ್ಕಾಗಿ ತಮ್ಮವರಿಗಾಗಿ ಹಗಲು ರಾತ್ರಿ ದುಡಿಯುವ ಏಕೈಕ ಜೀವ ಎಂದರೇ ಅಪ್ಪ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಎಸ್.ಆರ್.ಪಿಯ ಕಮಾಂಡೆಂಟ್ ಹಮಜಾಹುಸೇನ್, ಆಯೋಜಕ ಹೆಡ್‌ಕಾನಸ್ಟೆಬಲ್ ಮೌಲಾಲಿ ಆಲಗೂರ ಮಾತನಾಡಿದರು. ಬಳಿಕ ಇದೇ ಮೊದಲ ಬಾರಿಗೆ ನಬಿರೋಶನ್ ಪ್ರಕಾಶನ ಬೋರಗಿ ವತಿಯಿಂದ ಸ್ಥಾಪಿಸಲ್ಪಟ್ಟ ರಾಜ್ಯಮಟ್ಟದ ಅಪ್ಪ ಪ್ರಶಸ್ತಿ ಹಾಗೂ ₹೫ ಸಾವಿರ ನಗದು ಬಹುಮಾನವನ್ನು ಚಾಣಕ್ಯ ಅಕಾಡೆಮಿ ಮುಖ್ಯಸ್ಥ ಎಂ.ಎನ್ ಬಿರಾದಾರ ಅವರಿಗೆ ನೀಡಿ ಗೌರವಿಸಲಾಯಿತು. ಪೊಲೀಸ್ ಕಲಾವಿದರಿಗೆ ಆರಕ್ಷಕ ಕಲಾರತ್ನ ಪುರಸ್ಕಾರ ಮತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯ ಮೇಲೆ ಕಾರಾಗೃಹ ಅಧೀಕ್ಷಕ ಎಸ್.ಎಸ್.ಮೇಟಿ, ಡಿವೈಎಸ್ಪಿ ನಾಗೇಂದ್ರ ಸ್ವಾಮಿ,ಗದ್ದಿಗೆಪ್ಪ, ಸುರೇಶ್ ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಮೈಸೂರಿನ ಪಿಎಸೈ ಆರ್.ಲಕ್ಷ್ಮೀ ಸೀತಾರಾಮು ನಿರೂಪಿಸಿದರು. ದಾವಣಗೆರೆ ಆರಕ್ಷಕ ದೇವರಾಜ್ ಸ್ವಾಗತಿಸಿದರು.