ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಆದಿಚುಂಚನಗಿರಿ ಶ್ರೀಕ್ಷೇತ್ರದಲ್ಲಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವದ ಪ್ರಯುಕ್ತ ಫೆ.19 ಮತ್ತು 20ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ವಿಜ್ಞಾತಂ ಉತ್ಸವ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ.ಎನ್.ಎಸ್.ರಾಮೇಗೌಡ ತಿಳಿಸಿದರು.ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನವನ್ನು ಧಾರ್ಮಿಕ ಹಾಗೂ ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಅರ್ಥೈಸುವ ಪ್ರಯತ್ನದಂತೆಯೇ ಧರ್ಮ ಹಾಗೂ ವೈದಿಕ ಸಂಸ್ಕೃತಿಯನ್ನು ವೈಜ್ಞಾನಿಕವಾಗಿ ಪರಾಮರ್ಶಿಸಿ ಮನುಕುಲದ ಉನ್ನತಿಗೆ ಪೂರಕ ಜ್ಞಾನ ಒದಗಿಸುವುದು ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ ಎಂದರು.
ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಆಗುತ್ತಿರುವ ಇತ್ತೀಚಿನ ಹೊಸ ಆವಿಷ್ಕಾರಗಳನ್ನು ನಮ್ಮ ಶಿಕ್ಷಣ ಟ್ರಸ್ಟ್‌ನ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಏರ್ಪಡಿಸುವ ಹಲವು ಬಗೆಯ ಹೊಸ ವಿಜ್ಞಾನ ಪ್ರದರ್ಶನಗಳ ಮೂಲಕ ಯುವ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಲಾಗುವುದು. ಹಾಗಾಗಿ ಉನ್ನತ ಶಿಕ್ಷಣ ಸಂಸ್ಥೆಯ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಭಕ್ತರು ವಿಜ್ಞಾತಂ ಉತ್ಸವದ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.150ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆ:
ಶ್ರೀಕ್ಷೇತ್ರದಲ್ಲಿ ಎರಡು ದಿನಗಳ ಕಾಲ ನಡೆಯುವ ವಿಜ್ಞಾತಂ ಉತ್ಸವದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಸ್ಥಾಪಿತವಾಗಿರುವ ಆದಿಚುಂಚನಗಿರಿ ವಿಶ್ವವಿದ್ಯಾಲಯದ 11 ಅಂಗ ಸಂಸ್ಥೆಗಳು ಸೇರಿದಂತೆ ಸಂಸ್ಥೆಯ 40 ಶಿಕ್ಷಣ ಸಂಸ್ಥೆಗಳು ಹೊರಗಿನ ವಿವಿಧ ಪ್ರತಿಷ್ಠಿತ ಕಾಲೇಜು ಹಾಗೂ ಸರ್ಕಾರಿ ಸಂಸ್ಥೆಗಳಾದ ಇಸ್ರೋ, ಎಚ್‌ಎಎಲ್, ಡಿಆರ್‌ಡಿಒ, ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ, ಆಧ್ಯಾತ್ಮಿಕ ಕೇಂದ್ರಗಳು, ರಾಜ್ಯದ ವಿವಿಧ ಭಾಗಗಳಿಂದ ಪಾಲ್ಗೊಂಡು 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಿಚಾರಗಳ ಮಾದರಿ ಪ್ರದರ್ಶಿಸಲಿದ್ದಾರೆ ಎಂದರು.ಫೆ.19ರಂದು ವಿಜ್ಞಾತಂ ಉತ್ಸವಕ್ಕೆ ಚಾಲನೆ:
ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ತುಮಕೂರಿನ ಸಿದ್ದಗಂಗಾಮಠದ ಪೀಠಾಧ್ಯಕ್ಷ ಶ್ರೀಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಜರುಗುವ ವಿಜ್ಞಾತಂ ಉತ್ಸವದ ವಸ್ತು ಪ್ರದರ್ಶನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಜ್ಞಾತಂ ಸಂಚಯ-3 ಬಿಡುಗಡೆ ಮಾಡುವರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಗೌತಮ್ ರಾಧಾಕೃಷ್ಣ ದೇಸಿರಾಜು ವಸ್ತು ಪ್ರದರ್ಶನ ಉದ್ಘಾಟಿಸುವರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.ಶ್ರೀಗಳಿಗೆ ಪಟ್ಟಾಭೀಷೇಕ:
ಫೆ.20ರ ಬೆಳಗ್ಗೆ 10.30ಕ್ಕೆ ಶ್ರೀಮಠದ ಬಿಜಿಎಸ್ ಸಭಾ ಭವನದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ 12ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುಜರಾತ್‌ನ ರಾಜ್‌ಕೋಟ್ ಆರ್ಷ ವಿದ್ಯಾಮಂದಿರದ ಅಧ್ಯಕ್ಷ ಶ್ರೀಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಸಮ್ಮುಖದಲ್ಲಿ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.ಹರಿದ್ವಾರದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಶ್ರೀಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರಿಗೆ ಪ್ರಶಸ್ತಿ ಪದಕವನ್ನೊಳಗೊಂಡ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸುವರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ವಿಪಕ್ಷ ನಾಯಕ ಆರ್.ಅಶೋಕ್, ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಳ್ಳುವರು ಎಂದರು.
ಸಹಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ:ಎರಡು ದಿನಗಳ ಕಾಲ ನಡೆಯುವ ವಿಜ್ಞಾತಂ ಉತ್ಸವ ಹಾಗೂ ವಸ್ತು ಪ್ರದರ್ಶನದಲ್ಲಿ ರಾಜ್ಯ ಮತ್ತು ನೆರೆ ರಾಜ್ಯಗಳ ವಿದ್ಯಾರ್ಥಿಗಳೂ ಸೇರಿದಂತೆ ಸಹಸ್ರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಶ್ರೀಮಠದಿಂದ ಕಲ್ಪಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಟ್ರಸ್ಟ್‌ನ ರಿಜಿಸ್ಟ್ರಾರ್ ಚಂದ್ರೇಗೌಡ, ಕಾಲೇಜಿನ ಪ್ರಾಂಶುಪಾಲ ಡಾ. ಶ್ರೇಯಸ್ ಕೃಷ್ಣ, ಕಾಲೇಜು ಸಮಿತಿ ಸದಸ್ಯ ಎಚ್.ಟಿ.ಕೃಷ್ಣೇಗೌಡ, ಸಿಇಓ ಕಚೇರಿ ಸುಚೇತನ್‌ಕುಮಾರ್ ಇದ್ದರು.