ಸಾರಾಂಶ
ಗದಗ: ಮಕ್ಕಳು ಸಂತೋಷವಾಗಿ ರಕ್ಷಿತ ವಾತಾವರಣ, ಗೌರವಯುತವಾಗಿ ಯಾವುದೇ ತಾರತಮ್ಯವಿಲ್ಲದೇ ಬಾಲ್ಯ ಅನುಭವಿಸಬೇಕು. ಬೆಳೆಯಬೇಕು. ವಿಶೇಷ ಚೇತನಮಕ್ಕಳ ಬೆಳವಣಿಗೆಗೆ ನಮ್ಮೆಲ್ಲರ ಪ್ರೀತಿಯ ಸಹಕಾರ ಅವಶ್ಯ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಶನಿವಾರ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಗಂಗಿಮಡಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ವಿಶೇಷ ಚೇತನರ ಅರಿವು ಹಾಗೂ ಉತ್ತಮ ಪರಿಸರ ನಿರ್ಮಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಎಸ್.ವಿ.ಚಳಗೇರಿ, ಮಕ್ಕಳು ತಾರತಮ್ಯವಿಲ್ಲದ ಶಿಕ್ಷಣ ಪಡೆಯಬೇಕು. ವಿಶೇಷ ಚೇತನ ಮಕ್ಕಳಿಗಾಗಿ ಶಾಲೆಯಲ್ಲಿ ಅನೇಕ ಸೌಲಭ್ಯಗಳಿದ್ದು, ಅವುಗಳ ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ವಿಕಲತೆಯ 21 ವರ್ಗಿಕರಣಗಳು ಹಾಗೂ ಅವುಗಳ ಲಕ್ಷಣ ತಿಳಿಸಿದರು.
ಅಧ್ಯಕ್ಷತೆಯನ್ನು ಮುಖ್ಯಾಪಾಧ್ಯಾಯಿನಿ ಆರ್.ಬಿ. ಸಂಕಣ್ಣವರ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕಕ್ಕೆ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ವಿಶೇಷ ಚೇತನ ಶಿಕ್ಷಕಿ ಆರ್.ಬಿ. ಹಾದಿಮನಿ ಅವರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ಆಗಮಿಸಿದ್ದ ಮುಖ್ಯೋಪಾಧ್ಯಾಯಿನಿ ಎಸ್.ಆರ್.ಚಾರಹುಸೇನ ಮುಂತಾದವರು ಮಾತನಾಡಿದರು.ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಪಿ. ಹಿರೇಮಠ, ಡಿ.ಎಸ್. ಮೀಶೇನವರ, ಎಸ್.ಜಿ. ಗಿರಿತಮ್ಮಣ್ಣವರ, ಐ.ಡಿ.ಕಬ್ಬೇರಹಳ್ಳಿ, ಅಲ್ತಾಫ್ ನದಾಫ್, ಜ್ಯೋತಿ ಅಂಗಡಿ, ನೀಲಮ್ಮ ಹಿರೇಮಠ ಉಪಸ್ಥಿತರಿದ್ದರು. ಆರ್.ಡಿ. ಮಗಜಿ ಸ್ವಾಗತಿಸಿದರು, ವಿ.ಆರ್. ಹಂಸಿ ನಿರೂಪಿಸಿದರು ಸಿ.ಎಸ್. ಬೆಳಹಾರ ವಂದಿಸಿದರು. ಶಾಲಾ ಮಕ್ಕಳು, ಪಾಲಕರು, ಸಿಬ್ಬಂದಿ ಉಪಸ್ಥಿತರಿದ್ದರು.