ಉಡುಪಿ: ನಗರದ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಬುಧವಾರ ಎಂಸಿಕೆಎಸ್ ಫುಡ್ ಫಾರ್ ದಿ ಹಂಗ್ರಿ ಫೌಂಡೇಶನ್ ವತಿಯಿಂದ 65 ಬಡ ರೋಗಿಗಳಿಗೆ ಆಹಾರ ಪದಾರ್ಥಗಳ ಕಿಟ್ ಹಾಗೂ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.ಈ ಸಂದರ್ಭ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಮಾತನಾಡಿ, ಈ ತರಹದ ಕಾರ್ಯಕ್ರಮಗಳಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ದಾನಗಳಲ್ಲಿ ಶ್ರೇಷ್ಠದಾನ ಎಂದರೆ ರಕ್ತದಾನ ಎಂದು ಹೇಳಲಾಗುತ್ತದೆ. ಅದೇ ರೀತಿ ಹಸಿದವರಿಗೆ ಆಹಾರ ನೀಡುವುದು ಮಹಾದಾನ ಎಂದರು. ಎಂಸಿಕೆಎಸ್ ಸಂಚಾಲಕಿ ನಿಧಿ ಮಾತನಾಡಿ, ಈ ಹಿಂದೆ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಹಾಗೂ ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಿಸಿದ್ದು, ಅದೇ ರೀತಿ ಫೌಂಡೇಶನ್‌ನ ಸಂಸ್ಥಾಪಕ ಗ್ರ‍್ಯಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಇವರ ಸವಿನೆನಪಿಗಾಗಿ ಇಂದು ಬಡ ರೋಗಿಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಎ.ಆರ್.ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್ ಮತ್ತು ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆ ಆಪ್ತ ಸಮಾಲೋಚಕ ಮನು ಎಸ್. ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.