ಕೊಪ್ಪಳ: ಒಳಮೀಸಲಾತಿ ಜಾರಿ ಮಾಡಿದ ಬಳಿಕವೇ ನೇಮಕಾತಿ ಮಾಡುವಂತೆ ಆಗ್ರಹಿಸಿ ಅಖಿಲ ಭಾರತ ಮಾದಿಗ ದಂಡೋರ ಸಮಾಜದಿಂದ ನಗರದಲ್ಲಿ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿತಲ್ಲದೇ ಸಂಘಟನೆಯ ಮುಖಂಡ ಬಿ. ಹುಸೇನಪ್ಪ ಅವರು ರಕ್ತದಲ್ಲಿ ಸರ್ಕಾರಕ್ಕೆ ಮನವಿ ಪತ್ರ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂರೂವರೆ ದಶಕದಿಂದ ದಲಿತ ಸಮುದಾಯ ಸರ್ಕಾರದ ಮುಂದೆ ಒಳ ಮೀಸಲಾತಿಗಾಗಿ ಮನವಿ ಮಾಡುತ್ತಾ ಬಂದಿದೆ. ಆದರೆ ಈ ವರೆಗೂ ನಮಗೆ ಸಮರ್ಪಕ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ಹಲವು ರೀತಿಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದೆ. ಆದರೂ ಸರ್ಕಾರ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಈಗಾಗಲೇ ನಮಗೆ ನೀಡಿರುವ ಶೇ. ೬ರ ಒಳ ಮೀಸಲಾತಿ ಜಾರಿಗೊಳಿಸಿ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಯ ಮುಖಂಡರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.ರಾಜ್ಯ ಸರ್ಕಾರ ಒಳಮೀಸಲಾತಿಯನ್ನೇನೋ ನೀಡಿದೆ, ಆದರೆ, ಅದರ ಅಡಿಯಲ್ಲಿಯೇ ನೇಮಕಾತಿ ಮಾಡುವ ಬದಲು ಅದಕ್ಕೂ ಮೊದಲೇ ನೇಮಕಾತಿ ಮಾಡಲು ಮುಂದಾಗಿರುವುದು ಸರಿಯಲ್ಲ. ಒಳಮೀಸಲಾತಿಯಂತೆಯೇ ನೇಮಕಾತಿ ಮಾಡುವಂತೆ ಆಗ್ರಹಿಸಲಾಯಿತು. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಂಥ ಹೋರಾಟಕ್ಕೂ ಸಂಘಟನೆ ಸಿದ್ಧವಾಗಿದೆ ಎಂದು ಎಚ್ಚರಿಕೆ ನೀಡಿದರು.