ಇಂದಿನ ಸಿನಿಮಾಗಳಿಂದ ಕೆರಳುವ ಭಾವನೆ: ಗಿರೀಶ್‌ ಕಾಸರವಳ್ಳಿ

| Published : Aug 26 2024, 01:36 AM IST

ಸಾರಾಂಶ

ಇಂದು ಯಾರೂ ಬೇಕಾದರೂ ಸಿನಿಮಾ ಮಾಡಬಹುದು. ಆದರೆ, ಅದು ಪರಂಪರೆ ಭಾಗವಾಗಿ ಉಳಿದುಕೊಂಡಿಲ್ಲ. ತಂತ್ರಗಳನ್ನು ಅವಲಂಬಿಸಿದೆ

ಶಿವಮೊಗ್ಗ: ಇಂದು ಸಿನಿಮಾ ಸಂಪೂರ್ಣ ವಾಣಿಜ್ಯೋದ್ಯಮ ಆಗಿದೆ. ಅದು ಜನರನ್ನು ಕೆರಳಿಸುತ್ತದೆ ಹೊರತು ಅರಳಿಸುವುದಿಲ್ಲ ಎಂದು ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಹೇಳಿದರು.

ಇಲ್ಲಿನ ಎಟಿಎನ್‌ಸಿಸಿ ಕಾಲೇಜಿನ ಫ್ರೆಂಡ್ಸ್ ಸೆಂಟರ್ ಹಾಲ್‌ನಲ್ಲಿ ಆಯೋಜಿಸಿದ್ದ ಬಹುಮುಖಿ ಶಿವಮೊಗ್ಗದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಯಾರೂ ಬೇಕಾದರೂ ಸಿನಿಮಾ ಮಾಡಬಹುದು. ಆದರೆ, ಅದು ಪರಂಪರೆ ಭಾಗವಾಗಿ ಉಳಿದುಕೊಂಡಿಲ್ಲ. ತಂತ್ರಗಳನ್ನು ಅವಲಂಬಿಸಿದೆ ಎಂದರು.

ಸಿನಿಮಾ ಮಾನವ ಇತಿಹಾಸದಲ್ಲಿ ಪ್ರಮುಖ ಭಾಗವಾಗಿ ಬಂದಿದೆ. ಇಂದು ಮೊಬೈಲ್ ಇದ್ದವರೆಲ್ಲ ಸಿನಿಮಾ ಮಾಡಬಹುದು. ಅದು ಹಣವಿದ್ದವರ ಸ್ವತ್ತಾಗಿದೆ. ಆದರೆ, ಅದು ಸಾಮಾಜಿಕ ಸಂವಾದ ಹುಟ್ಟು ಹಾಕುವುದಿಲ್ಲ. ಸಿನಿಮಾ ಸಾಮಾಜಿಕ ಕೃತಿಗಳಂತೆ ಸಂವಾದ ಹುಟ್ಟು ಹಾಕಬೇಕು. ಸಿನಿಮಾ ಕಲೆಯಾಗಿಯೇ ಉಳಿಯಬೇಕಾದರೆ ಅದು ಹೊಸ ಚರ್ಚೆ ಹುಟ್ಟು ಹಾಕಬೇಕು ಎಂದರು.

ಸಿನಿಮಾ ಎಂಬುದು 1893ರಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ಅದು ದೃಶ್ಯ ಕಲೆ ಆಗಿತ್ತು ನಂತರ ದೃಶ್ಯ, ಶ್ರವ್ಯ ಎರಡು ಕಲೆ ಆಗಿತ್ತು. ನಂತರ 50ರ ದಶಕದಲ್ಲಿ ಜೋಡಿಸುವುದು ಅನಂತರ 70ರ ದಶಕದಲ್ಲಿ ಕಾಣಿಸುವುದು ಇತ್ತೀಚೆಗೆ ನೋಡುಗರನ್ನು ಉದ್ರೇಕಿಸುವದು ಎಂದಾಗಿದೆ. ಈಗ ಸಿನಿಮಾ ಅನುಭವಿಸುವುದಾಗಿದೆ. ಆದರೆ, ಸಿನಿಮಾ ನಮಗೆ ಅರಿವು ಮೂಡಿಸಬೇಕು. ಸಿನಿಮಾ ಸುಳ್ಳು ಹೇಳುವ ಜಾಹೀರಾತು ಆಗಬಾರದು. ಹೊಸದಾಗಿ ಚಿತ್ರ ನೀಡುವವರು ಸಾಮಾಜಿಕ ಚಳವಳಿ ಕಲೆ ಅರ್ಥ ಮಾಡಿಕೊಳ್ಳಬೇಕು. ಇತರ ಕಲೆಗಳು ಜನರಿಗೆ ಏನನ್ನು ಕೊಡುತ್ತದೆ. ಅದಕ್ಕಿಂತ ಭಿನ್ನವಾಗಿ ಚಿತ್ರಗಳು ಜನರಿಗೆ ಏನನ್ನು ಕೊಡುತ್ತದೆ ಎನ್ನುವುದು ಮುಖ್ಯ ವಾಗುತ್ತದೆ ಎಂದರು.

ಇಂದು ಪ್ರಶಸ್ತಿ ಗಳು ಕೂಡ ಜನಪ್ರಿಯ ಚಿತ್ರಗಳಿಗೆ ಬೇಗ ಅರ್ಥವಾಗುವ ಚಿತ್ರಗಳಿಗೆ ಸಿಗುತ್ತಿದೆ. ಅದು ಕೆರಳಿಸುವ ಚಿತ್ರ ಆಗಿರಬಹುದು ಎಂದರು.

ಅನಂತಮೂರ್ತಿಯವರ ಘಟಶ್ರಾದ್ಧ ಚಿತ್ರದಿಂದಲೇ ನನ್ನ ಸಿನಿಮಾ ಪ್ರಯಾಣ ಆರಂಭಿಸಿದೆ. ಈಗ ಅನಂತಮೂರ್ತಿಯವರ ಆಕಾಶ ಮತ್ತು ಬೆಕ್ಕು ಕತೆಯನ್ನು ಸಿನಿಮಾ ಮಾಡುವ ಯೋಚನೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಬಹುಮುಖಿ ಶಿವಮೊಗ್ಗ ಡಾ.ಎಚ್.ಎಸ್.ನಾಗಭೂಷಣ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿ, ನಿರೂಪಣೆ ಮಾಡಿದರು.