2 ಹಂತದಲ್ಲಿ ಬನ್ನೇರುಘಟ್ಟ ರಸ್ತೆ ಮೂಲಕವಾಗಿ ನಾಗವಾರ ಕಾಳೇನ ಅಗ್ರಹಾರ ಸಂಪರ್ಕಿಸಲಿರುವ ಮೆಟ್ರೋ ಗುಲಾಬಿ ಮಾರ್ಗ ಮುಕ್ತ?

| Published : Aug 26 2024, 01:36 AM IST / Updated: Aug 26 2024, 05:21 AM IST

2 ಹಂತದಲ್ಲಿ ಬನ್ನೇರುಘಟ್ಟ ರಸ್ತೆ ಮೂಲಕವಾಗಿ ನಾಗವಾರ ಕಾಳೇನ ಅಗ್ರಹಾರ ಸಂಪರ್ಕಿಸಲಿರುವ ಮೆಟ್ರೋ ಗುಲಾಬಿ ಮಾರ್ಗ ಮುಕ್ತ?
Share this Article
  • FB
  • TW
  • Linkdin
  • Email

ಸಾರಾಂಶ

ಬನ್ನೇರುಘಟ್ಟ ರಸ್ತೆ ಮೂಲಕವಾಗಿ ನಾಗವಾರ ಕಾಳೇನ ಅಗ್ರಹಾರ ಸಂಪರ್ಕಿಸಲಿರುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗ (21.25ಕಿಮೀ) ಮುಂದಿನ ವರ್ಷಾಂತ್ಯಕ್ಕೆ ಒಂದೇ ಹಂತದ ಬದಲು ಎರಡು ಹಂತದಲ್ಲಿ ಜನಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

 ಬೆಂಗಳೂರು : ಬನ್ನೇರುಘಟ್ಟ ರಸ್ತೆ ಮೂಲಕವಾಗಿ ನಾಗವಾರ ಕಾಳೇನ ಅಗ್ರಹಾರ ಸಂಪರ್ಕಿಸಲಿರುವ ನಮ್ಮ ಮೆಟ್ರೋದ ಗುಲಾಬಿ ಮಾರ್ಗ (21.25ಕಿಮೀ) ಮುಂದಿನ ವರ್ಷಾಂತ್ಯಕ್ಕೆ ಒಂದೇ ಹಂತದ ಬದಲು ಎರಡು ಹಂತದಲ್ಲಿ ಜನಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

ಮೊದಲ ಹಂತವಾಗಿ ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ತಾವರೆಕೆರೆವರೆಗೆ (ಸ್ವಾಗತ್ ಕ್ರಾಸ್‌) 7.5 ಕಿಮೀ ಎತ್ತರಿಸಿದ ಮಾರ್ಗ 2025ರ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆಗೊಳ್ಳಬಹುದು. ಹಾಗೂ ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.8ಕಿಮೀ ಸುರಂಗ ಮಾರ್ಗದಲ್ಲಿ ಮುಂದಿನ 2026ರ ಜೂನ್ ನಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಗುಲಾಬಿ ಮಾರ್ಗದ ಸುರಂಗ ಕೊರೆವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೇ. 97ರಷ್ಟು ಮುಗಿದಿದೆ. ಕೆ.ಜೆ.ಹಳ್ಳಿಯಿಂದ ನಾಗವಾರದವರೆಗೆ ಟಿಬಿಎಂ ತುಂಗಾ (938 ಮೀ.) ಹಾಗೂ ಟಿಬಿಎಂ ಭದ್ರಾ (939 ಮೀ.) ಸುರಂಗ ಕೊರೆಯುತ್ತಿವೆ. ಎರಡೂ ಯಂತ್ರಗಳು ಕ್ರಮವಾಗಿ ಫೆಬ್ರವರಿ ಹಾಗೂ ಏಪ್ರಿಲ್‌ನಿಂದ ತಮ್ಮ ಕೊನೆಯ ಸುರಂಗ ಕೊರೆವ ಕಾರ್ಯಾಚರಣೆ ನಡೆಸುತ್ತಿವೆ. ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಈ ಕೆಲಸ ಮುಗಿಯುವ ನಿರೀಕ್ಷೆಯಿದೆ. ಎತ್ತರಿಸಿದ ಮಾರ್ಗ, ಸುರಂಗದ ಬೆನ್ನಲ್ಲೇ ಹಳಿ ಜೋಡಣೆ, ನಿಲ್ದಾಣಗಳ ಕಾರ್ಯವೂ ಮುಂದುವರಿದಿದೆ.

ಸದ್ಯ ಕಾಮಗಾರಿ ಚುರುಕಿನಿಂದ ಸಾಗಿದ್ದು, ಮುಂದಿನ ವರ್ಷಾಂತ್ಯಕ್ಕೆ ಮೊದಲ ಹಂತ ಸಂಚಾರಕ್ಕೆ ತೆರೆಯಬಹುದು. ಅಥವಾ 2026ಕ್ಕೆ ಎರಡು ಹಂತಗಳಲ್ಲಿ ವಾಣಿಜ್ಯ ಸಂಚಾರ ಆರಂಭವಾಗಬಹುದು ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

16 ರೈಲುಗಳ ಸಂಚಾರ

ಇನ್ನು, ಗುಲಾಬಿ ಮಾರ್ಗಕ್ಕೆ ಭಾರತ್ ಅರ್ಥ್‌ ಮೂವರ್ಸ್‌ ಲಿ. (ಬಿಇಎಂಎಲ್‌) ನಿಂದ ರೋಲಿಂಗ್ ಸ್ಟಾಕ್‌ (ಬೋಗಿ) ಪೂರೈಕೆ ಆಗಬೇಕಿದೆ. ಜೂನ್‌ 2025ರಿಂದ 2026ರ ಡಿಸೆಂಬರ್‌ ಅಂತ್ಯದವರೆಗೆ 318 ಬೋಗಿಗಳನ್ನು (53 ರೈಲು) ಒದಗಿಸುವ ಒಪ್ಪಂದವನ್ನು ಬಿಎಂಆರ್‌ಸಿಎಲ್‌ ಹಾಗೂ ಬಿಇಎಂಎಲ್‌ ಮಾಡಿಕೊಂಡಿವೆ. ₹ 3,177 ಕೋಟಿ ವೆಚ್ಚದ ಈ ಒಪ್ಪಂದ ಇದಾಗಿದೆ. ಇದರಲ್ಲಿ 96 ಬೋಗಿಗಳು ಅಂದರೆ 16 ರೈಲುಗಳು (ಆರು ಬೋಗಿಯ ರೈಲು) ಗುಲಾಬಿ ಮಾರ್ಗದಲ್ಲಿ ಸಂಚರಿಸಲಿವೆ. ಉಳಿದವು ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ - ಕೆ.ಆರ್.ಪುರ (ಹಂತ 1) ಹಾಗೂ ಕೆ.ಆರ್‌.ಪುರ - ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಹಂತ 2) ಸಂಪರ್ಕಿಸುವ ನೀಲಿ ಮಾರ್ಗಕ್ಕೆ ಬಳಕೆ ಆಗಲಿವೆ.