ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಆರೋಗ್ಯ ಕಾಪಾಡಿ: ಎಸ್‌.ಎಂ.ಕುರಣಿ

| Published : Aug 26 2024, 01:36 AM IST

ಸಾರಾಂಶ

ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಎಂ.ಕುರಣಿ ಮಾತನಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ದಿಸೆಯಲ್ಲಿ ಕ್ರೀಡಾಭಿಮಾನ ಬೆಳೆಸಿಕೊಂಡು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಮುಂದಾಗಬೇಕು ಎಂದು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ.ಕುರಣಿ ಕರೆ ನೀಡಿದರು.

ಬಾಗಲಕೋಟೆ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಮುಧೋಳ, ಸಮೂಹ ಸಂಪನ್ಮೂಲ ಕೇಂದ್ರ ಲಕ್ಷಾನಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಚಗಲ್ ಸಂಯುಕ್ತಾಶ್ರಯದಲ್ಲಿ ಲಕ್ಷಾನಟ್ಟಿ ಕ್ಲಸ್ಟರಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ ಶ್ರಮಕ್ಕೆ ಆದ್ಯತೆ ನೀಡದೇ ದುಶ್ಚಟಗಳ ದಾಸರಾಗುತ್ತಿರುವ ಬಹುತೇಕ ಯುವಕರು ದೈಹಿಕವಾಗಿ ಒಂದಿಷ್ಟು ಶ್ರಮ ವಹಿಸದಿದ್ದರೇ ಮುಂದಿನ ದಿನಗಳಲ್ಲಿ ದೇಹ ಭಾರವೆನಿಸಲಿದೆ. ಕ್ರೀಡಾ ಸಾಧನೆ ಬದಲಾಗಿ ಆರೋಗ್ಯದ ಹಿತದೃಷ್ಠಿಯಿಂದಾದರೂ ಮಕ್ಕಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಸಿಆರ್‌ಪಿ ಜಿ.ಬಿ.ಗಾಣಗೇರ ಮಾತನಾಡಿ, ದೇಶಿಯ ಕ್ರೀಡಾಸಕ್ತಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ವಿಶೇಷ ತರಬೇತಿ ನೀಡಿ ಪ್ರೋತ್ಸಾಹಿಸಬೇಕಾಗಿದೆ, ಈ ದೆಸೆಯಲ್ಲಿ ನಮ್ಮೆಲ್ಲ ದೈಹಿಕ ಶಿಕ್ಷಕ ಬಾಂಧವರು ಶ್ರಮಿಸುವಂತೆ ಕರೆ ನೀಡಿದರು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಬಿ.ಬಿ.ಪಾಟೀಲ ವಹಿಸಿದ್ದರು. ಕ್ರೀಡಾಧ್ವಜಾರೋಹಣವನ್ನು ದೈಹಿಕ ಶಿಕ್ಷಕರಾದ ಮಂಜು ಪಾಟೀಲ, ರಾಮನಗೌಡ ಪಾಟೀಲ ನೇರವೇರಿಸಿದರು. ವೈ.ಎಂ.ಪಮ್ಮಾರ, ಕೆ.ಎಲ್.ಮಾಳೇದ, ಎನ್.ಟಿ.ಪಾಟಿಲ, ಸುರೇಶ ಹರಕಂಗಿ ಎಸ್‌ಡಿಎಂಸಿ ಸದಸ್ಯರು, ವರ್ಚಗಲ್ ಗ್ರಾಮದ ಗುರು ಹಿರಿಯರು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

೨೫-ಎಲ್.ಕೆ.ಪಿ-೧ : ಲೋಕಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಚಗಲ್ ಇವರ ಸಂಯುಕ್ತ ಆಶ್ರಯದಲ್ಲಿ ಲಕ್ಷಾನಟ್ಟಿ ಕ್ಲಸ್ಟರಿನ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಗಣ್ಯರು ಉದ್ಘಾಟಿಸಿದರು. ಈ ವೇಳೆ ಎಸ್.ಎಂ.ಕುರಣಿ, ಬಿ.ಬಿ.ಪಾಟೀಲ, ಗಂಗಾಧರ ಗಾಣಗೇರ, ಮಂಜು ಪಾಟೀಲ ಇತರರು ಇದ್ದರು.