ಗೆಳೆಯನ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆತನ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಹಾಗೂ ಕೃತ್ಯಕ್ಕೆ ಸಹಚರಿಸಿದ್ದ ನಾಲ್ವರು ಸೇರಿದಂತೆ 5 ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೆಳೆಯನ ಮನೆಯಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಆತನ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಹಾಗೂ ಕೃತ್ಯಕ್ಕೆ ಸಹಚರಿಸಿದ್ದ ನಾಲ್ವರು ಸೇರಿದಂತೆ 5 ಆರೋಪಿಗಳನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಅತ್ಯಾಚಾರ ಆರೋಪದಡಿ ಗುಬ್ಬಲಾಳದ ಅಮರೇಶ ಹಾಗೂ ಈ ಕೃತ್ಯಕ್ಕೆ ಸಹಕರಿಸಿದ ಸೋಮಶೇಖರ್, ಜಗದೀಶ್, ಪ್ರದೀಪ್ ಹಾಗೂ ರಾಮಪ್ಪ ಬಂಧಿತರಾಗಿದ್ದು, ತಲಘಟ್ಟಪುರ ಸಮೀಪ ಗೆಳೆಯ ಸೋಮಶೇಖರ್ ಮನೆಗೆ ಕಳೆದ 3 ದಿನದ ಹಿಂದೆ ಸಂತ್ರಸ್ತೆ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಮೂಲಗಳು ಹೇಳಿವೆ.
ನಗರದಲ್ಲಿ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯಲ್ಲಿ ರಾಯಚೂರು ಜಿಲ್ಲೆಯ ಸೋಮಶೇಖರ್ ಹಾಗೂ ಆತನ ಸ್ನೇಹಿತರು ಕೆಲಸ ಮಾಡುತ್ತಿದ್ದು, ಒಂದೇ ಜಿಲ್ಲೆಯವರಾದ ಕಾರಣ ಅವರ ಮಧ್ಯೆ ಒಡನಾಟವಿತ್ತು. ಕಳೆದೊಂದು ವರ್ಷದಿಂದ ಸಂತ್ರಸ್ತೆ ಜತೆ ಸೋಮಶೇಖರ್‌ಗೆ ಸ್ನೇಹವಿತ್ತು. ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿರುವ ಆಕೆ, ಯಲಹಂಕದಲ್ಲಿ ನೆಲೆಸಿದ್ದಾಳೆ. ಆಗಾಗ್ಗೆ ಗೆಳೆತನದಲ್ಲಿ ಸೋಮಶೇಖರ್ ಹಾಗೂ ಆಕೆ ಭೇಟಿಯಾಗುತ್ತಿದ್ದರು. ತನ್ನ ಹುಟ್ಟುಹಬ್ಬ ಪಾರ್ಟಿಗೆ ಬರುವಂತೆ ಗೆಳೆತಿಗೆ ಸೋಮಶೇಖರ್ ಸ್ನೇಹಿತರನ್ನು ಆಹ್ವಾನಿಸಿದ್ದನು.ಕೂಡಲೇ ನಮ್ಮ-112ಗೆ ಕರೆ:
ಅಂತೆಯೇ ಗುಬ್ಬಲಾಳ ಸಮೀಪದ ಸೋಮಶೇಖರ್ ಮನೆಗೆ ಸಂತ್ರಸ್ತೆ ಹಾಗೂ ಆತನ ನಾಲ್ವರು ಸ್ನೇಹಿತರು ತೆರಳಿದ್ದರು. ರಾತ್ರಿ ಊಟ ಮುಗಿದ ಬಳಿಕ ಮನೆಯಲ್ಲಿ ಆಕೆಯ ಮೇಲೆ ಸೋಮಶೇಖರ್ ಸ್ನೇಹಿತ ಅಮರೇಶ ಅತ್ಯಾಚಾರ ಎಸಗಿದ್ದಾನೆ. ಕೂಡಲೇ ಆಕೆ ಪೊಲೀಸ್ ನಿಯಂತ್ರಣ ಕೊಠಡಿಗೆ (ನಮ್ಮ-112) ಕರೆ ಮಾಡಿದ್ದಾಳೆ. ತಕ್ಷಣ ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಹೊಯ್ಸಳ ಪೊಲೀಸರು ತೆರಳಿ ಸಂತ್ರಸ್ತೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ತನ್ನ ಮೇಲೆ ಓರ್ವ ಅತ್ಯಾಚಾರ ಎಸಗಿದ್ದು, ಮತ್ತೆ ನಾಲ್ವರು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿ ತಲಘಟ್ಟಪುರ ಠಾಣೆಗೆ ಆಕೆ ದೂರು ನೀಡಿದ್ದಾಳೆ. ಅದರನ್ವಯ ಅತ್ಯಾಚಾರ ಆರೋಪದಡಿ ಅಮರೇಶ್ ಹಾಗೂ ಇನ್ನುಳಿದವರು ಕೃತ್ಯಕ್ಕೆ ಸಮಾನ ಉದ್ದೇಶ ಹೊಂದಿದ್ದ ಆಪಾದನೆಯಡಿ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.