ಹರಪನಹಳ್ಳಿ: ಹಬ್ಬ ಹರಿದಿನಗಳು ಸಂಸ್ಕೃತಿಯ ಪ್ರತೀಕಗಳಾಗಿದ್ದು, ಅವುಗಳನ್ನು ಸೌಹಾರ್ದದಿಂದ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಡಿವೈಎಸ್ಪಿ ಸಂತೋಷ ಚೌವ್ಹಾಣ್ ತಿಳಿಸಿದರು.

ಹರಪನಹಳ್ಳಿ ಪೊಲೀಸ್ ಉಪವಿಭಾಗದಿಂದ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಮೊಹರಂ ಹಬ್ಬದ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಬ್ಬದ ಸಂಭ್ರಮದಲ್ಲಿ ಯುವಕರನ್ನು ಸಮಾಜದ ಮುಖಂಡರು ನಿಯಂತ್ರಣದಲ್ಲಿಟ್ಟುಕೊಂಡು ಯಾವುದೇ ಘರ್ಷಣೆಗೆ ಅವಕಾಶ ನೀಡುವ ಮತ್ತು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳಬೇಕು. ಯಾರಾದರೂ ಕಾನೂನು ಮೀರಿ ವರ್ತಿಸಿದರೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿ ಮತ್ತು ಇಲಾಖೆಯ ನಿರ್ದೆಶನದಂತೆ ಆಚರಣೆ ಮಾಡಬೇಕು ಎಂದರು.

ಮುಸ್ಲಿಂ ಸಮಾಜದ ಮುಖಂಡ ಮೆಹಬೂಬ್ ಸಾಹೇಬ್ ಮಾತನಾಡಿ, ಮೊಹರಂ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಎಂದಿನಂತೆ ಪ್ರಾರ್ಥನೆ ಮಾತ್ರ ನೆರವೇರಿಸಲಾಗುತ್ತದೆ. ಇದಕ್ಕೆ ಯಾವುದೇ ರೀತಿಯ ಜನದಟ್ಟನೆಗೆ ಅವಕಾಶ ನೀಡಲಾಗುವುದಿಲ್ಲ ಎಂದರು.

ಸಿಪಿಐ ಮಹಾಂತೇಶ ಸಜ್ಜನ್ ಮಾತನಾಡಿ, ಹರಪನಹಳ್ಳಿ ಪಟ್ಟಣ ಹಿಂದಿನಿಂದಲೂ ಶಾಂತಿ, ಸೌಹಾರ್ದ


ಕಾಯ್ದುಕೊಂಡು ಬಂದಿದೆ. ಇದನ್ನು ಉಳಿಸಿ ಬೆಳೆಸುವ ನಿಟ್ಟಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಶೇಷ ಬಂದೋಬಸ್ತ್ ಒದಗಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಹೂವಿನಹಡಗಲಿ ಸಿಪಿಐ ಮಲ್ಲಪ್ಪ ಹೂಗಾರ, ಹಲುವಾಗಲು ಪಿಎಸ್ಐ ಕಿರಣ್ ಕುಮಾರ್ ಅರಸಿಕೇರಿ ಪಿಎಸ್ಐ ವಿಜಯ್ ಕೃಷ್ಣ, ಚಿಗಟೇರಿ ಪಿಎಸ್ಐ ನಾಗರತ್ನಮ್ಮ, ಹರಪನಹಳ್ಳಿ ಪಿಎಸ್ಐ ಶಂಭುಲಿಂಗ ಹಿರೇಮಠ, ಮೀನಾಕ್ಷಿ, ಅಶೋಕ ಬೇವೂರ್, ಜಿ.ಕೆ. ಅಬ್ಬಾಸ್, ಮಣಿಕಂಠ ಸೇರಿದಂತೆ ಇತರರು ಹಾಜರಿದ್ದರು.