ಸಂಡೂರು: ತಾಲೂಕಿನ ಎಂ.ತುಂಬರಗುದ್ದಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಉಳಿತಾಯದ ಮಹತ್ವವನ್ನು ತಿಳಿಸುವ ಘನ ಉದ್ದೇಶದೊಂದಿಗೆ ಶುಕ್ರವಾರ ಸಂಕಲ್ಪ ಎಂಬ ಹೆಸರಿನಲ್ಲಿ ಮಕ್ಕಳ ಹಣ ಉಳಿತಾಯ ಬ್ಯಾಂಕ್ ಆರಂಭಿಸಲಾಯಿತು.
ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಆರಂಭದ ದಿನವಾದ ಶುಕ್ರವಾರದಂದೇ ಶಾಲೆಯಲ್ಲಿರುವ ೧೩೦ ವಿದ್ಯಾರ್ಥಿಗಳಲ್ಲಿ ೧೧೦ ವಿದ್ಯಾರ್ಥಿಗಳು ಉಳಿತಾಯ ಖಾತೆ ತೆರೆದಿದ್ದು, ವಿವಿಧ ಮಕ್ಕಳಿಂದ ಅವರ ಖಾತೆಗಳಿಗೆ ₹೧೮೦೦ ಜಮೆಯಾಗಿರುವುದು ವಿಶೇಷ.ಖಾತೆದಾರರಿಗೆ ಸೂಚನೆಗಳು:
ಖಾತೆ ತೆರೆದ ವಿದ್ಯಾರ್ಥಿಗಳಿಗೆ ಪಾಸ್‌ಪುಸ್ತಕ, ಬ್ಯಾಂಕಿನ ಚೆಕ್ ಮಾದರಿಯಲ್ಲಿ ಶಾಲೆಯ ಚೆಕ್ ತಯಾರಿಸಿ ಉಚಿತವಾಗಿ ವಿತರಿಸಲಾಗುವುದು. ವಿದ್ಯಾರ್ಥಿಗಳು ತಮಗೆ ನಿಗದಿ ಪಡಿಸಿದ ದಿನದಂದು ಪ್ರತಿ ಬಾರಿ ಕನಿಷ್ಠ ₹೧೦ ಜಮೆ ಮಾಡಬಹುದು. ತಿಂಗಳಲ್ಲಿ ೨ ಬಾರಿ ಅಂದರೆ ೧೫ ದಿನಕ್ಕೊಮ್ಮೆ ಚೆಕ್ ಬಳಸಿ ಹಣವನ್ನು ಹಿಂಪಡೆಯಬಹುದು. ಪಾಸ್‌ಬುಕ್ ಕಳೆದರೆ ₹೧೦ ಪಾವತಿಸಿ, ಹೊಸ ಪುಸ್ತಕ ಪಡೆಯಬಹುದು. ತಿಂಗಳಲ್ಲಿ ಒಮ್ಮೆ ವಿದ್ಯಾರ್ಥಿಗಳ ಪಾಲಕರಿಗೆ ವಿದ್ಯಾರ್ಥಿಗಳ ಖಾತೆಯಲ್ಲಿರುವ ಉಳಿತಾಯದ ಹಣದ ವಿವರವನ್ನು ಮೆಸೇಜ್ ಮೂಲಕ ತಿಳಿಸಲಾಗುವುದು.ಶಿಕ್ಷಕರಿಗೆ ನಿರ್ವಹಣೆಯ ಹೊಣೆ:
ವಿದ್ಯಾರ್ಥಿಗಳ ಖಾತೆಗಳ ನಿರ್ವಹಣೆಗಾಗಿ ಶಿಕ್ಷಕರಾದ ಕೃಷ್ಣಪ್ಪ, ಭಾಸ್ಕರ್ ಅವರನ್ನು ಸಹಾಯಕ ವ್ಯವಸ್ಥಾಪಕರಾಗಿ, ಮಹೇಶ್ವರಪ್ಪ ಅವರನ್ನು ವ್ಯವಸ್ಥಾಪಕರಾಗಿ ನೇಮಿಸಲಾಗಿದೆ.
ಪ್ರೋತ್ಸಾಹಕ ಯೋಜನೆ:
ಕನಿಷ್ಠ ₹೧೦೦ ಉಳಿತಾಯಕ್ಕೆ ಪೆನ್ಸಿಲ್, ₹೩೦೦ಕ್ಕೆ ಪುಸ್ತಕ ಹಾಗೂ ₹೫೦೦ಕ್ಕೆ ವಿಶೇಷ ಬಹುಮಾನವನ್ನು ಶಾಲೆಯಿಂದ ನೀಡುವುದಾಗಿ ತಿಳಿಸಲಾಗಿದೆ. ಈ ಪ್ರೋತ್ಸಾಹಕ ಯೋಜನೆ ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ಉಳಿತಾಯ ಮಾಡಲು ಪ್ರೇರಣೆ ನೀಡಲಿದೆ.ವ್ಯವಸ್ಥಿತ ಜೀವನ ನಡೆಸಲು ಸಹಕಾರಿ:
ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅಮರೇಶ ಸೊನ್ನದ ಮಾತನಾಡಿ, ಇಂದಿನ ಉಳಿತಾಯದ ಚಿಂತನೆ ಭವಿಷ್ಯದಲ್ಲಿ ಆರೋಗ್ಯಕರ. ವ್ಯವಸ್ಥಿತ ಜೀವನ ನಡೆಸಲು ಸಹಕಾರಿ. ಮಕ್ಕಳಲ್ಲಿ ಉಳಿತಾಯದ ಮನೋಭಾವವನ್ನು ಹಾಗೂ ಬ್ಯಾಂಕ್ ವ್ಯವಹಾರದ ಪರಿಕಲ್ಪನೆ ಮೂಡಿಸುವುದು ಹಾಗೂ ಚೆಕ್ ಮತ್ತು ಡೆಪಾಸಿಟ್ ಫಾರಂ ಬಳಕೆ ಬಗ್ಗೆ ತಿಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದರು.ಶಿಕ್ಷಕರಾದ ಮಹೇಶ್ವರಪ್ಪ ಮಾತನಾಡಿ, ಅತಿಹೆಚ್ಚು ಉಳಿತಾಯ ಮಾಡುವ ಇಬ್ಬರು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ವಿಶೇಷ ಕೊಡುಗೆ ನೀಡುವ ಭರವಸೆ ನೀಡಿದರು. ಪ್ರವೀಣಕುಮಾರ್ ಸ್ವಾಗತಿಸಿ, ಉಳಿತಾಯ ಮಾಡಬಹುದಾದ ವಿವಿಧ ಸಂದರ್ಭಗಳ ಕುರಿತು ವಿವರಿಸಿದರು. ಶಿಕ್ಷಕಿ ನೀಲಾಂಬಿಕಾ ಉಳಿತಾಯದ ಮಹತ್ವವನ್ನು ಕುರಿತು ಮಾತನಾಡಿದರು. ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರೆ, ಭಾಸ್ಕರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವರಾಜ್, ಸದಸ್ಯರಾದ ಹನುಮಂತಪ್ಪ, ನಾಗಣ್ಣ, ದಾದಾ ಖಲಂದರ್, ಪ್ರಭಾಕರ್, ಗಿಡ್ಡಪ್ಪ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಲ್ಲಿ ಉಳಿತಾಯ ಮನೋಭಾವನೆ ಮೂಡಿಸಲು, ಬ್ಯಾಂಕಿನ ವ್ಯವಹಾರಗಳ ಬಗ್ಗೆ ತಿಳಿಸಲು ಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ನೂತನ ಸಂಕಲ್ಪ ಮಕ್ಕಳ ಹಣ ಉಳಿತಾಯ ಬ್ಯಾಂಕನ್ನು ಆರಂಭಿಸಿರುವುದು ಉತ್ತಮ ಉಪಕ್ರಮವಾಗಿದೆ. ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ವಿದ್ಯಾರ್ಥಿಗಳಂತೆ ತಾವು ಕೂಡ ಶಾಲೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ.