ರಾಣಿಬೆನ್ನೂರಿನ ಮಾರುತಿನಗರದ ಬೆಂಚಿ ತುಂಗಾಜಲ ಚೌಡೇಶ್ವರಿದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಸೋಮವಾರ ಬೆಳಗ್ಗೆ ಶಾಸಕ ಪ್ರಕಾಶ ಕೋಳಿವಾಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ರಾಣಿಬೆನ್ನೂರು: ಇಲ್ಲಿನ ಮಾರುತಿನಗರದ ಬೆಂಚಿ ತುಂಗಾಜಲ ಚೌಡೇಶ್ವರಿದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಸೋಮವಾರ ಬೆಳಗ್ಗೆ ಶಾಸಕ ಪ್ರಕಾಶ ಕೋಳಿವಾಡ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಸ್ಥಳೀಯ ಮಾರುತಿ ನಗರದ ಚೌಕಿಮನಿಯ ಮೂಲ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ಶೃಂಗರಿಸಿದ ರಥದಲ್ಲಿ ಕುಳ್ಳರಿಸಿ ಮಾರುತಿ ನಗರದ ಮುಖ್ಯ ರಸ್ತೆ, ಸಿದ್ದೇಶ್ವರ ದೇವಸ್ಥಾನ ರಸ್ತೆ, ಹಳೆ ಪಿ.ಬಿ.ರಸ್ತೆ ನಾಡಿಗ್ಗೇರ ಓಣಿ, ಕಾಕಿ ಗಲ್ಲಿ, ಕುರುಬಗೇರಿ, ನೆಹರು ಮಾರ್ಕೇಟ್, ಎಂ.ಜಿ.ರಸ್ತೆ, ದೊಡ್ಡಪೇಟೆ, ರೊಡ್ಡನವರ ಓಣಿ, ಸುಭಾಷ ಚೌಕ್, ಗೌಳಿ ಗಲ್ಲಿ, ಹಳೇ ಸರ್ಕಾರಿ ಆಸ್ಪತ್ರೆ ರಸ್ತೆ, ಸಿದ್ದೇಶ್ವರ ನಗರ, ವೀರಭದ್ರೇಶ್ವರ ನಗರ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತಂದು ಬೆಂಚಿ ತುಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ, ಡೊಳ್ಳು, ಸಮಾಳ ವಾದ್ಯ, ಕೀಲು ಕುದುರೆ ಕುಣಿತ, ಆನೆ ಮೆರವಣಿಗೆ, ಜಾಂಜ್ ಮೇಳ, ಆರ್ಕೆಸ್ಟ್ರಾದವರು ತಮ್ಮ ಕಲಾ ಪ್ರಾವಿಣ್ಯ, ವೀರಭದ್ರನ ಕುಣಿತ ಮತ್ತು ಮಹಿಳಾ ವೀರಗಾಸೆ ಪ್ರದರ್ಶಿಸಿದರು. ಕರಡಿ ವೇಷ, ಬೊಂಬೆಗಳ ಮುಖವಾಡ ಧರಿಸಿದವರು ಜನರ ಗಮನ ಸೆಳೆದರು. ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಮಹಿಳೆಯರು ರಸ್ತೆ ಮೇಲೆ ನೀರು ಹಾಕಿ ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿ ಚಿತ್ತಾರಗಳನ್ನು ಬಿಡಿಸಿದ್ದರು. ಭಕ್ತರು ದೇವಿಗೆ ವಿವಿಧ ತರಹದ ಬೃಹತ್ ಹೂಮಾಲೆಗಳು, ಹಣ್ಣು ಕಾಯಿ ನೈವೆದ್ಯ ಅರ್ಪಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ತುಂಗಾಜಲ ಚೌಡೇಶ್ವರಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ಚೋಳಪ್ಪ ಕಸವಾಳ, ಗ್ರೇಡ್-2 ತಹಸೀಲ್ದಾರ ಅರುಣ ಕಾರಗಿ, ನಗರಸಭೆ ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ಪೂರ್ಣಿಮಾ ಕೋಳಿವಾಡ, ಮಂಗಳಗೌರಿ ಪೂಜಾರ, ಭಾರತಿ ಜಂಬಗಿ, ಸಿದ್ದಪ್ಪ ಅತಡಕರ, ಮಂಜುನಾಥ ಗೌಡಶಿವಣ್ಣನವರ, ಬಸವರಾಜ ಹುಚಗೊಂಡರ, ಸೋಮಶೇಖರ ಗೌಡಶಿವಣ್ಣನವರ, ಪುಟ್ಟಪ್ಪ ಮರಿಯಮ್ಮನವರ, ಕುಮಾರ ಶಾವಿ, ಲಕ್ಷ್ಮಣ ಸಾಲಿ, ಕುಮಾರ ಮಡಿವಾಳರ, ಪ್ರಮೋದ ಕೋರ್ಪಡೆ, ಅಶೋಕ ಅರಳೇಶ್ವರ, ಹರೀಶ ಕೂನಬೇವು, ಅನಿಲ ಖಂಡೆ, ಬಿ.ಪಿ.ಶಿಡೇನೂರ, ಸಿದ್ದು ಚಿಕ್ಕಬಿದರಿ, ಮಂಜುನಾಥ ಕಾಟಿ, ಮಂಜುನಾಥ ಕಬ್ಬಿಣದ, ಚನ್ನಪ್ಪ ಸಪ್ಪಣ್ಣವರ, ಶಿವಾನಂದ ಸಾಲಗೇರಿ, ಭೋಜಪ್ಪ ಕನಕೇರಿ, ಶಿವು ಕಡೂರ, ರಮೇಶ ಗುತ್ತಲ ಸೇರಿದಂತೆ ಸಹಸ್ರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.