ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಂಘೀಕುಸ್ತಿ

| Published : Dec 04 2024, 12:36 AM IST

ಸಾರಾಂಶ

ಈಗಾಗಲೇ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರ ಆಯ್ಕೆ ಬಾಕಿ ಇದೆ. ಅದಕ್ಕಾಗಿ ಭಾರೀ ಹಣಾಹಣಿ ನಡೆಯುತ್ತಿದ್ದು, ಬಾಗೂರು ಮಂಜೇಗೌಡ ಅವರ ಸಹೋದರ ಸಾರಿಗೆ ಇಲಾಖೆ ನೌಕರ ಕೃಷ್ಣೇಗೌಡ ಪರ ಹೆಚ್ಚಿನ ಒಲವು ಪ್ರಾಥಮಿಕವಾಗಿ ಕಂಡು ಬರುತ್ತಿದ್ದು, ಮತ್ತೊಬ್ಬ ಆಕಾಂಕ್ಷಿ ಶ್ರೀನಿವಾಸ್ ಸಹ ತೆರೆಮರೆಯಲ್ಲಿ ತಮ್ಮ ಗೆಲುವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಅಧ್ಯಕ್ಷರ ಚುನಾವಣೆಗೆ ಸಮಬಲದ ಹೋರಾಟ ನಡೆಯುತ್ತಿದ್ದು, ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ.

ಕನ್ನಡಪ್ರಭ ವಾರ್ತೆ ಹಾಸನ

ಇಷ್ಟು ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಯುತ್ತದೆ ಎನ್ನುವುದೇ ಮಾಮೂಲಿ ಜನರಿಗೆ ತಿಳಿದಿರಲಿಲ್ಲ. ಆದರೆ, ಇತ್ತೀಚಿನ ಕೆಲ ವರ್ಷಗಳಿಂದೀಚೆಗೆ ಭಾರೀ ಪೈಪೋಟಿಯೊಂದಿಗೆ ನಡೆಯುವ ಈ ಚುನಾವಣೆ ಈ ಬಾರಿ ಯಾವುದೇ ಸಾರ್ವತ್ರಿಕ ಚುನಾವಣೆಗೂ ಕಮ್ಮಿ ಇಲ್ಲ ಎನ್ನುವಂತೆ ನಡೆದಿದೆ. ಈಗಾಗಲೇ ನಿರ್ದೇಶಕರ ಸ್ಥಾನದ ಚುನಾವಣೆ ನಡೆದಿದ್ದು, ಜಿಲ್ಲಾ ಅಧ್ಯಕ್ಷರ ಆಯ್ಕೆ ಬಾಕಿ ಇದೆ. ಅದಕ್ಕಾಗಿ ಭಾರೀ ಹಣಾಹಣಿ ನಡೆಯುತ್ತಿದ್ದು, ಡಿ.4 ರಂದು ಚುನಾವಣೆ ನಡೆಯಲಿದೆ.

ಈಗಾಗಲೇ ನಿರ್ದೇಶಕ ಸ್ಥಾನದ ಚುನಾವಣೆ ನಡೆದಿದ್ದು, ಬಹುತೇಕ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರೆ ಮತ್ತಷ್ಟು ನಿರ್ದೇಶಕರು ಚುನಾವಣೆ ಮೂಲಕ ಆಯ್ಕೆಯಾಗಿ ಬಂದಿದ್ದಾರೆ. ಸರ್ಕಾರಿ ನೌಕರರು ಎಂದರೆ ಪಕ್ಷಾತೀತವಾಗಿರಬೇಕು. ಹಾಗೆಯೇ ಅದರ ಚುನಾವಣೆ ಕೂಡ ರಾಜಕೀಯ ಕರಿನೆರಳಿನಿಂದ ಹೊರತಾಗಿ ಇರಬೇಕು. ಆದರೆ, ನಿರ್ದೇಶಕರ ಚುನಾವಣೆಯಲ್ಲಿಯೇ ರಾಜಕೀಯ ಪಕ್ಷಗಳ ಮುಖಂಡರ ಶ್ರೀರಕ್ಷೆಯೊಂದಿಗೆ ಹಲವು ನಿರ್ದೇಶಕರು ಆರಿಸಿ ಬಂದಿದ್ದಾರೆ. ಇದೀಗ ಅಧ್ಯಕ್ಷೀಯ ಚುನಾವಣೆ ಬಾಕಿ ಇದ್ದು, ಡಿ.4 ರಂದು ನಡೆಯುವ ಚುನಾವಣೆಯಲ್ಲಿ 66 ಮಂದಿ ನಿರ್ದೇಶಕರು ಹಾಗೂ ಎಂಟು ಮಂದಿ ತಾಲೂಕು ಅಧ್ಯಕ್ಷರು ಸೇರಿದಂತೆ 74 ಜನ ಮತ ಚಲಾಯಿಸಲಿದ್ದಾರೆ. ಈಗಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ಬಾಗೂರು ಕೃಷ್ಣೇಗೌಡ ಹಾಗೂ ಶ್ರೀನಿವಾಸ್ ಸಾಕಷ್ಟು ಪ್ರಯತ್ನಗಳನ್ನು ನಡೆಸುವ ಮೂಲಕ ನಿರ್ದೇಶಕರುಗಳ ಮನವೊಲಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಹಾಸನ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ತದನಂತರ ರಾಜ್ಯಾಧ್ಯಕ್ಷರಾಗಿಯು ಸೇವೆ ಸಲ್ಲಿಸಿ, ನಂತರ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಬಾಗೂರು ಮಂಜೇಗೌಡ ಅವರ ಸಹೋದರ ಸಾರಿಗೆ ಇಲಾಖೆ ನೌಕರ ಕೃಷ್ಣೇಗೌಡ ಪರ ಹೆಚ್ಚಿನ ಒಲವು ಪ್ರಾಥಮಿಕವಾಗಿ ಕಂಡು ಬರುತ್ತಿದ್ದು, ಮತ್ತೊಬ್ಬ ಆಕಾಂಕ್ಷಿ ಶ್ರೀನಿವಾಸ್ ಸಹ ತೆರೆಮರೆಯಲ್ಲಿ ತಮ್ಮ ಗೆಲುವಿಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಅಧ್ಯಕ್ಷರ ಚುನಾವಣೆಗೆ ಸಮಬಲದ ಹೋರಾಟ ನಡೆಯುತ್ತಿದ್ದು, ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ.

ಒಟ್ಟಾರೆ ಯಾವ ರಾಜಕೀಯ ಪಕ್ಷದ ಚುನಾವಣೆಗೂ ಕಮ್ಮಿ ಇಲ್ಲದಂತೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೀಯ ಚುನಾವಣೆಯ ಅಖಾಡ ರಂಗೇರಿದ್ದು, ಗುರುವಾರ ಸ್ಪಷ್ಟ ಚಿತ್ರಣ ಸಿಗಲಿದೆ.