ಮಳೆಯಿಂದಾಗಿ ಚಾಮುಂಡಿಬೆಟ್ಟದಲ್ಲಿ ರಸ್ತೆಗೆ ಉರುಳಿಬಿದ್ದ ಬಂಡೆ

| Published : Dec 04 2024, 12:35 AM IST

ಮಳೆಯಿಂದಾಗಿ ಚಾಮುಂಡಿಬೆಟ್ಟದಲ್ಲಿ ರಸ್ತೆಗೆ ಉರುಳಿಬಿದ್ದ ಬಂಡೆ
Share this Article
  • FB
  • TW
  • Linkdin
  • Email

ಸಾರಾಂಶ

. ಬಂಡೆ ರಸ್ತೆ ಮಧ್ಯೆ ಇದ್ದರೆ, ರಸ್ತೆ ಬದಿಯಲ್ಲಿ ಮಣ್ಣು ಹಾಗೂ ಸಣ್ಣ-ಪುಟ್ಟ ಕಲ್ಲುಗಳು ಬೆಟ್ಟದಿಂದ ಕುಸಿದಿದ್ದವು.

ಕನ್ನಡಪ್ರಭ ವಾರ್ತೆ ಮೈಸೂರು

ಫೆಂಗಲ್ ಚಂಡಮಾರುತ ಪ್ರಭಾವದಿಂದಾಗಿ ಮೈಸೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಚಾಮುಂಡಿಬೆಟ್ಟದ ರಸ್ತೆಗೆ ಬೃಹತ್ ಗಾತ್ರದ ಬಂಡೆಯೊಂದು ಉರುಳಿ ಬಿದ್ದಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.

ತಾವರಕಟ್ಟೆಯಿಂದ ಚಾಮುಂಡಿಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕಡಿದಾದ ತಿರುವಿನಲ್ಲಿ ಮಳೆ ನೀರಿನಿ ಹರಿವಿನಿಂದಾಗಿ ರಸ್ತೆಗೆ ಬಂಡೆ ಉರುಳಿ ಬಿದ್ದಿದೆ. ರಾತ್ರಿ ವೇಳೆ ಯಾವುದೇ ವಾಹನ ಸಂಚಾರ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಚಾಮುಂಡಿಬೆಟ್ಟದಲ್ಲಿ ರಾತ್ರಿ ತಂಗಿದ್ದ ಕೆಎಸ್ಆರ್ ಟಿಸಿ ಬಸ್ ಮಂಗಳವಾರ ಬೆಳಗ್ಗೆ ಬೆಟ್ಟದಿಂದ ಮೈಸೂರಿಗೆ ಬರುವಾಗ ಬಂಡೆ ಬಿದ್ದಿರುವುದನ್ನು ಬಸ್ ಚಾಲಕ ಗಮನಿಸಿದ್ದಾರೆ. ಬಂಡೆ ರಸ್ತೆ ಮಧ್ಯೆ ಇದ್ದರೆ, ರಸ್ತೆ ಬದಿಯಲ್ಲಿ ಮಣ್ಣು ಹಾಗೂ ಸಣ್ಣ-ಪುಟ್ಟ ಕಲ್ಲುಗಳು ಬೆಟ್ಟದಿಂದ ಕುಸಿದಿದ್ದವು.

ಚಾಲಕ ತಕ್ಷಣವೇ ಬಸ್ ನಿಲ್ಲಿಸಿ, ಪ್ರಯಾಣಿಕರು, ನಿರ್ವಾಹಕರ ಸಹಾಯದಿಂದ ರಸ್ತೆ ಬದಿಯಿದ್ದ ಕಲ್ಲುಗಳನ್ನು ಬದಿಗೆ ಸರಿಸಿ, ದೊಡ್ಡ ಬಂಡೆಯನ್ನು ಪಕ್ಕಕ್ಕೆ ತಳ್ಳಿದ್ದಾರೆ. ನಂತರ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ.

ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿರುವ ವಿಷಯ ತಿಳಿದು ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ, ಜೆಸಿಬಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಬಂಡೆ ಹಾಗೂ ರಸ್ತೆ ಬದಿ ಬಿದ್ದಿದ್ದ ಮಣ್ಣು ಮತ್ತು ಕಲ್ಲುಗಳ ರಾಶಿಯನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

-- ಬಾಕ್ಸ್--

ಮಳೆಯಿಂದಾಗಿ ಪಾಲಿಕೆ ಮೇಲ್ಛಾವಣಿಯಲ್ಲಿ ಬಿರುಕು- ಪ್ಲೈವುಡ್ ಶೀಟ್ ಕುಸಿತಮೈಸೂರುನಿರಂತರ ಮಳೆಯಿಂದಾಗಿ ಮೈಸೂರು ಮಹಾನಗರ ಪಾಲಿಕೆಯ ಕಟ್ಟಡದ ಮೇಲ್ಛಾವಣಿಯಲ್ಲಿ ಬಿರುಕು ಬಿಟ್ಟಿದ್ದು, ಪ್ಲೈವುಡ್ ಶೀಟ್ ಕುಸಿತವಾಗಿದೆ.ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದ ಮೇಲ್ಛಾವಣಿಗೆ ಅಲಂಕಾರ ಮಾಡಿದ್ದ ಪ್ಲೈವುಡ್ ಶೀಟ್ ಕುಸಿದು, ಮಳೆ ನೀರು ಸುರಿದು ಕಡತಗಳು, ದಾಖಲೆಗಳು ಹಾಳಾಗಿವೆ. ಪೀಠೋಪಕರಣಗಳು ದಿಕ್ಕಾಪಾಲಾಗಿ ಬಿದ್ದಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಪಾಳು ಕಟ್ಟಡದಂತೆ ಆಗಿದೆ. ಪಾಲಿಕೆ ಕಟ್ಟಡದ ಮೇಲ್ಛಾವಣಿಯಲ್ಲೂ ನೀರು ಸೋರಿಕೆ ಆಗುತ್ತಿದ್ದು, ಅಲ್ಲಲ್ಲಿ ನೀರು ಜಿನುಗುತ್ತಿದೆ. ಹೀಗಾಗಿ, ಪಾಲಿಕೆ ಸಿಬ್ಬಂದಿ ಕಾರಿಡಾರ್ ನಲ್ಲಿ ಬಕೆಟ್ ಇರಿಸಿದ್ದಾರೆ. ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಲು ನಗರ ಪಾಲಿಕೆ ಅಧಿಕಾರಿಗಳು ಮುಂದಾಗಬೇಕಿದೆ.ಇನ್ನು ಸರಸ್ವತಿಪುರಂನಲ್ಲಿ ಜಿಟಿ ಜಿಟಿ ಮಳೆಯಿಂದ ಏಕಕಾಲಕ್ಕೆ ಎರಡು ಮರಗಳು ಉರುಳಿ ಬಿದ್ದು, ಎರಡು ಕಾರುಗಳು ಜಖಂ ಆಗಿವೆ.