ಸಾರಾಂಶ
ಖಾಸಗಿ ಕಂಪನಿಗಳಿಂದ ಪ್ರತಿ ವರ್ಷ ನೀಡುವಂತಹ ಸಿಎಸ್‌ಆರ್ ಅನುದಾನ ಸಹ ಸಾಕಷ್ಟು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಸದ್ಬಳಕೆ ಆಗಬೇಕು.
ಹೊಸಕೋಟೆ: ತಾಲೂಕಿನಲ್ಲಿರುವಂತಹ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಅನುದಾನ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಾಗಿ ಸದ್ಬಳಕೆ ಆಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಹೊಸಕೋಟೆ ತಾಲೂಕಿನ ಕೈಗಾರಿಕೋದ್ಯಮಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ತಾಲೂಕಿನಲ್ಲಿರುವ ಸಾಕಷ್ಟು ಕೈಗಾರಿಕೆಗಳು ಕೋರೋನ ಎಂಬ ಮಹಾಮಾರಿ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಿಗೆ ಅನುದಾನದ ಸಂಪೂರ್ಣ ಸಹಕಾರವನ್ನು ನೀಡಿದ್ದು ಪ್ರಶಂಸನೀಯ. ಅದೇ ರೀತಿ ಖಾಸಗಿ ಕಂಪನಿಗಳಿಂದ ಪ್ರತಿ ವರ್ಷ ನೀಡುವಂತಹ ಸಿಎಸ್‌ಆರ್ ಅನುದಾನ ಸಹ ಸಾಕಷ್ಟು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಸದ್ಬಳಕೆ ಆಗಬೇಕು. ಪ್ರಮುಖವಾಗಿ ತಾಲೂಕಿನಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನಿಮ್ಮ ಸಿಎಸ್‌ಆರ್ ಅನುದಾನ ಸದ್ಬಳಕೆ ಆಗಬೇಕು ಎನ್ನುವುದು ನಮ್ಮ ಆಶಯವಾಗಿದ್ದು, ಎಲ್ಲಾ ಖಾಸಗಿ ಕಂಪನಿಗಳ ಸಂಪನ್ಮೂಲ ವ್ಯಕ್ತಿಗಳ ಸಹಕಾರ ಅತ್ಯಗತ್ಯ ಎಂದರು.
ಹೊಸಕೋಟೆ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ವೀಣಾ, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶಿವಮ್ಮ ಇವರೊಂದಿಗೆ ಖಾಸಗಿ ಸಂಸ್ಥೆಯ ಸಂಪನ್ಮೂಲ ಅಧಿಕಾರಿಗಳು ನಿರಂತರ ಸಂಪರ್ಕವನ್ನು ಪಡೆದುಕೊಂಡು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳ ಬೇಡಿಕೆಗಳಿಗೆ ಸ್ಪಂದಿಸಿ. ಅಥವಾ ತಾಲೂಕಿಗೆ ಅಗತ್ಯತೆ ಇರುವಂತಹ ತುರ್ತು ಅವಶ್ಯಕತೆಗಳ ಪಟ್ಟಿಯನ್ನು ನೀಡಲಿದ್ದು ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಶಾಸಕ ಶರತ್ ಬಚ್ಚೆಗೌಡ ಮನವಿ ಮಾಡಿದರು.ತಹಸೀಲ್ದಾರ್ ಸೋಮಶೇಖರ್, ತಾಲೂಕು ಪಂಚಾಯತ್ ಇಒ ಡಾ. ಸಿ.ಎನ್.ನಾರಾಯಣಸ್ವಾಮಿ, ಚೊಕ್ಕಹಳ್ಳಿ- ಪಿಲ್ಲಗುಂಪೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಹಾಜರಿದ್ದರು.