-ತರೀಕೆರೆ, ಅಜ್ಜಂಪುರ, ಕಡೂರು ತಾ. ರೈತರ ಪ್ರತಿಭಟನೆ। ಚಿತ್ರದುರ್ಗ ಭಾಗಕ್ಕೆ ನೀರು ಹರಿಸುವುದಕ್ಕೆ ವಿರೋಧ-ದೋರನಾಳು ಪಂಪ್ ಹೌಸ್‌ನಲ್ಲಿ ಚಾಲನೆ।ಯಾವ ಕಾರಣಕ್ಕೂ ಪಂಪ್‌ ಹೌಸ್‌ ಆಫ್‌ ಆಗದಂತೆ ಕಾಯಲು ತಯಾರಿಕನ್ನಡಪ್ರಭ ವಾರ್ತೆ ತರೀಕೆರೆಚಿತ್ರದುರ್ಗ ಭಾಗಕ್ಕೆ ಭದ್ರಾ ಮೇಲ್ದಂಡೆ ನಾಲೆ ಮೂಲಕ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲೂಕಿನ ರೈತರು ಮೊದಲು ತಮ್ಮ ಕೆರೆಗಳನ್ನು ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಸೋಮವಾರ ತರೀಕೆರೆ ಮಾಜಿ ಶಾಸಕ ಸುರೇಶ್‌ ನೇತೃತ್ವದಲ್ಲಿ ದೋರನಾಳು ಪಂಪ್ ಹೌಸ್ ಮೂಲಕ 54 ಕೆರೆಗಳಿಗೆ ನೀರು ತುಂಬಿಸುವ ಪಂಪ್‌ಗಳಿಗೆ ಚಾಲನೆ ನೀಡಲಾಗಿದೆ. ನಮ್ಮ ನೀರು, ನಮ್ಮಹಕ್ಕು ಎಂಬ ಘೋಷಣೆಯೊಂದಿಗೆ ತರೀಕೆರೆ ತಾಲೂಕಿನ ಕೆರೆಗಳಿಗೆ ಮೊದಲು ನೀರು ತುಂಬಿಸಲು ಈ ಭಾಗದ ರೈತರು ಒತ್ತಾಯಿಸಿದರು.ಈಗಾಗಲೇ ಪಂಪ್‌ ಹೌಸ್‌ಗೆ ಚಾಲನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಪಂಪ್‌ ಹೌಸ್‌ ಆಫ್‌ ಆಗದಂತೆ ರೈತರೇ ಸರತಿ ಸಾಲಿನಲ್ಲಿ ನಿಂತು ಕಾವಲು ಕಾಯುವುದಕ್ಕೂ ಸಿದ್ಧತೆ ಮಾಡಿ ಒಂದೊಂದು ಗ್ರಾಮದ ರೈತರು ಒಂದೊಂದು ದಿನ ಕಾವಲು ಕಾಯುವುದಕ್ಕೆ ತಯಾರಿ ಮಾಡಿಕೊಂಡಿದ್ದಾರೆ.ಭದ್ರಾ ಮೇಲ್ದಂಡೆ ಯೋಜನೆ ಸಮೀಪದ ತರೀಕೆರೆಯ ದೋರನಾಳು ಪಂಪ್ ಹೌಸ್ ಬಳಿ ಸೋಮವಾರ, ಲಿಂಗದಹಳ್ಳಿ ಮತ್ತು ಕಸಬಾ ಹೋಬಳಿಯ 54 ಕೆರೆಗಳಿಗೆ ನೀರು ಬಿಡುವ ಯಂತ್ರಕ್ಕೆ ಮಾಜಿ ಶಾಸಕ ಡಿ.ಎಸ್. ಸುರೇಶ್ ಪೂಜೆ ಸಲ್ಲಿಸಿ ಯಂತ್ರ ಚಾಲನೆ ನೀಡಿದರು.ಮೊದಲು ನಮಗೆ ನೀರು: ಸುರೇಶ್‌ಈ ವೇಳೆ ಮಾತನಾಡಿದ ಸುರೇಶ್‌ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭದ್ರಾ ಮೇಲ್ದಂಡೆ ಯೋಜನೆಗೆ ಆಯವ್ಯಯದಲ್ಲಿ ₹500 ಕೋಟಿ ಮೀಸಲಿಟ್ಟಿದ್ದರು. ತರೀಕೆರೆ ತಾಲೂಕಿನ ಎಲ್ಲಾ ಕೆರೆಗಳಿಗೆ ಮೊದಲು ನೀರು ತುಂಬಿಸಲು ಸರ್ಕಾರ ಕೂಡ ಸಮ್ಮತಿಸಿತ್ತು. ತಾವು ಹಾಗೂ ಶಾಸಕರಾದ ಸಿ.ಟಿ. ರವಿ, ಬೆಳ್ಳಿಪ್ರಕಾಶ್ ಅವರ ಸತತ ಪ್ರಯತ್ನದಿಂದ ಜಿಲ್ಲೆಯ ಮೂರು ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ಮಂಜೂರಾಗಿತ್ತು. 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಶೇ.90 ರಷ್ಟು ಕಾಮಗಾರಿ ಕೂಡ ಮುಗಿದಿತ್ತು ಎಂದು ಹೇಳಿದರು.ಇದೀಗ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ನಮ್ಮ ತರೀಕೆರೆ ಕ್ಷೇತ್ರದ ಕೆರೆಗಳಿಗೆ ನೀರು ಕೊಡದೆ ಬೇರೆ ಕಡೆಗೆ ನೀರು ತುಂಬಿಸಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು ಇದನ್ನು ನಾವು ಪ್ರತಿಭಟಿಸಬೇಕು. ಅಧಿಕಾರಿಗಳು ಯಂತ್ರಗಳನ್ನು ನಿಲ್ಲಿಸಬಹುದು. ಹಾಗಾಗಿ ರೈತರು ನಿತ್ಯ ಒಂದೊಂದು ಗ್ರಾಮದವರು ಒಂದೊಂದು ದಿನ ಸರತಿಯಂತೆ ಪಂಪ್ ಹೌಸ್ ಬಳಿಯೇ ಇದ್ದು ನೀರು ಬಿಡುವ ಯಂತ್ರ ನಿಲ್ಲಿಸದಂತೆ ನೋಡಿಕೊಳ್ಳಬೇಕು. ಮಳೆ ಬಾರದೆ ಈ ಭಾಗದ ಭೂಮಿ ಅಂತರ್ಜಲ ಕುಸಿದಿದೆ, ಜನ ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ನಾವು ರೈತರು ಗುಳೆ ಹೋಗಬೇಕಾದಂತಹ ಪರಿಸ್ಥಿತಿ ಇದೆ ಎಂದರು.2 ತಾಲೂಕು ಬರ ಪೀಡಿತ:ಸರ್ಕಾರ ತರೀಕೆರೆ ಮತ್ತು ಅಜ್ಜಂಪುರ ತಾಲೂಕುಗಳನ್ನು ಬರ ಪ್ರದೇಶವೆಂದು ಪ್ರಕಟಿಸಿದೆ. ಎರಡು ತಾಲೂಕುಗಳಲ್ಲಿ ದನಕರುಗಳಿಗೆ ನೀರಿಲ್ಲ, ಈ ಭಾಗದ ರೈತರ ಬದುಕು ಸರ್ವ ನಾಶವಾಗಿದೆ. ನಿಮ್ಮ ಜೊತೆ ನಾನು ಇರುತ್ತೇನೆ. ಇದು ರೈತರ ನೀರು, ರೈತರಿಗೆ ಹಕ್ಕು ಇದೆ, ಎಲ್ಲಾ ಕೆರೆಗಳಿಗೆ ಮೊದಲು ನೀರು ತುಂಬಿಸ ಬೇಕು ಎಂದು ಒತ್ತಾಯಿಸಿದ ಅವರು ಅಜ್ಜಂಪುರ ಭಾಗದ ನರಸೀಪುರ ಮತ್ತು ಹೆಬ್ಬೂರು ಬಳಿಯೂ ಇದೇ ರೀತಿ ಮೊದಲು ನಮ್ಮ ಕೆರೆಗಳಿಗೆ ನೀರು ತುಂಬಿಸುವಂತೆ ರೈತರೊಡಗೂಡಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.ಆನೆ ಕಾರಿಡಾರ್ ಗೆ ವಿರೋಧ: ಸರ್ಕಾರ ಈ ಭಾಗದಲ್ಲಿ ಮಾಡಲು ಹೊರಟಿರುವ ಆನೆ ಕಾರಿಡಾರ್ ಗೆ ನಮ್ಮ ಮತ್ತು ಈ ಭಾಗದ ರೈತರ ವಿರೋಧವಿದೆ. ಮೊದಲೇ ಈ ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತ. ಬೇರೆ ಕಡೆ ಪುಂಡಾನೆಗಳನ್ನು ಇಲ್ಲಿಗೆ ತಂದು ಬಿಡುವುದು ಸರಿಯಲ್ಲ ಎಂದು ಹೇಳಿದರು.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ, ಅ ಲೊಕೇಶನ್ ಪ್ರಕಾರ ತುಂಗಾ ನದಿ ಯಿಂದ ಭದ್ರಾ ಜಲಾಶಯಕ್ಕೆ 19 ಟಿಎಂಸಿ ನೀರು ತುಂಬಿಸಬೇಕು. ಆದರೆ ಈ ನೀರು ಬಂದಿಲ್ಲ. ನಮ್ಮ ನೀರು ನಮ್ಮ ಹಕ್ಕು, ಈ ಭಾಗದ 54 ಕೆರೆಗಳಿಗೆ ಡಿಸೆಂಬರ್ ತಿಂಗಳಲ್ಲೇ ನೀರು ತುಂಬಿಸಬೇಕು ಎಂಬುದು ನಮ್ಮ ಹೋರಾಟ. ಇಂದು ನೀರು ಬಿಡುವ ಯಂತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿದೆ. ಜಂಬದಹಳ್ಳದಲ್ಲಿ ನೀರಿಲ್ಲ. ನಾವು ನೊಂದವರು, ಮೊದಲು ಈ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ನಮ್ಮ ಕೆರೆಗಳಿಗೆ ನೀರು ಕೊಡದೆ ರೈತರಿಗೆ ಅನ್ಯಾಯವಾಗಿದೆ. ನಮ್ಮ ನೀರು ನಮ್ಮ ಹಕ್ಕು, ಮೊದಲು 54 ಕೆರೆಗಳಿಗೆ ನೀರು ತುಂಬಿಸಬೇಕು. ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಈ ಭಾಗದ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಅರೋಪಿಸಿದರು.ಮಳೆ ಇಲ್ಲದೆ ನೀರಿಲ್ಲದೆ ರೈತರು ಕೃಷಿ ಚಟುವಟಿಕೆ ನಿಲ್ಲಿಸಿದ್ದಾರೆ. ಈ ಭಾಗದ ಕೆರೆಗಳಿಗೆ ನೀರು ತುಂಬಿಸಲು ಮಾಜಿ ಶಾಸಕ ಡಿ.ಎಸ್.ಸುರೇಶ್ ನೇತೃತ್ವದಲ್ಲಿ ದೋರನಾಳು ಪಂಪ್ ಹೌಸ್ ನೀರು ಬಿಡುವ ಯಂತ್ರಕ್ಕೆ ಪೂಜೆ ಸಲ್ಲಿಸಿ ಯಂತ್ರಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.ಲಿಂಗದಹಳ್ಳಿ ಮತ್ತು ಕಸಬಾ ಹೋಬಳಿ ಆಯಾ ಕೆರೆಗಳ ಅಚ್ಚುಕಟ್ಟುದಾರರು, ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.7ಕೆಟಿಆರ್.ಕೆ1ಃಭದ್ರಾ ಮೇಲ್ದಂಡೆ ಯೋಜನೆಯ ಸಮೀಪದ ದೋರನಾಳು ಪಂಪ್ ಹೌಸ್.ನಲ್ಲಿ ಮಾಜಿ ಶಾಸಕ ಡಿ.ಎಸ್. ಸುರೇಶ್ ಕೆರೆಗಳಿಗೆ ನೀರು ತುಂಬಿಸುವ ಯಂತ್ರಕ್ಕೆ ಪೂಜೆ ಸಲ್ಲಿಸಿ ಯಂತ್ರಕ್ಕೆ ಚಾಲನೆ ನೀಡಿದರು.7ಕೆಟಿಆರ್.ಕೆ.2ಃದೋರನಾಳು ಪಂಪ್ ಹೌಸ್.ಬಳಿ ನೆಡೆದ ಸಭೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿದರು. ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಪುರಸಭೆ ಸದಸ್ಯ ಟಿ.ಎಂ. ಬೋಜರಾಜ್ ಮತ್ತಿತರರು ಇದ್ದಾರೆ.