ಕನ್ನಡಪ್ರಭ ವಾರ್ತೆ, ಚಿಟಗುಪ್ಪ (ಬೀದರ್‌)

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ‘ಭಾರತ್‌ ಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ’ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳನ್ನು ತಡೆದು ಬೆದರಿಕೆ ಹಾಕಿದ ಆರೋಪದ ಮೇಲೆ ಸ್ಥಳೀಯ ಶಾಹೀನ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಬ್ದುಲ್‌ ಹಕೀಮ್‌ ವಿರುದ್ಧ ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆಗಸ್ಟ್‌ 15ರಂದು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರಾಷ್ಟ್ರಗೀತೆ ಮುಕ್ತಾಯಗೊಂಡ ನಂತರ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬರುತ್ತಿದ್ದರು. ಈ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾಗರ ಗೌಳಿ ಹಾಗೂ ಇತರ ವಿದ್ಯಾರ್ಥಿಗಳು ದೇಶಭಕ್ತಿಯ ಜೈಘೋಷಗಳನ್ನು ಕೂಗಿದ್ದಾರೆ. ಆಗ ಪ್ರಾಂಶುಪಾಲ ಅಬ್ದುಲ್‌ ಹಕೀಮ್‌ ಅವರು ವಿದ್ಯಾರ್ಥಿಗಳನ್ನು ತಡೆದು, ಇದು ಒಂದು ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದ ಘೋಷಣೆ ಹೀಗಾಗಿ ಕಾಲೇಜಿನಲ್ಲಿ ಮತ್ತೊಮ್ಮೆ ಕೂಗದಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ತಾರತಮ್ಯ ಎಸಗಿ, ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡಲು ಪ್ರಾಂಶುಪಾಲರು ಯತ್ನಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ತಂದೆ ಹಿರೋಬಾ ಗೌಳಿ ಅವರು ಆ.17ರಂದು ಚಿಟಗುಪ್ಪ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಂಶುಪಾಲರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 126(2), 352, ಮತ್ತು 353(2)ರ ಅಡಿಯಲ್ಲಿ ಅಪರಾಧ ಸಂಖ್ಯೆ 97/2026ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.