ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಅನ್ಯಭಾಷಿಕರಿಗೆ ಸರ್ಕಾರಿ ಮನೆಗಳನ್ನು ಹಂಚುವ ಮೊದಲು 60 ವರ್ಷಗಳು ನಾಡಿಗೆ ಬೆಳಕು ನೀಡಲು ಮನೆ, ಜಮೀನು ಕಳೆದುಕೊಂಡು ಇಂದಿಗೂ ಕತ್ತಲೆಯಲ್ಲಿಯೇ ಇರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲು ಮನೆಗಳಿಗೆ ಹಕ್ಕು ಪತ್ರ, ಜಮೀನಿಗೆ ದಾಖಲೆಗಳನ್ನು ಸರ್ಕಾರ ನೀಡುವಂತೆ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಅನ್ಯಭಾಷಿಕರಿಗೆ ಸರ್ಕಾರಿ ಮನೆಗಳನ್ನು ಹಂಚುವ ಮೊದಲು 60 ವರ್ಷಗಳು ನಾಡಿಗೆ ಬೆಳಕು ನೀಡಲು ಮನೆ, ಜಮೀನು ಕಳೆದುಕೊಂಡು ಇಂದಿಗೂ ಕತ್ತಲೆಯಲ್ಲಿಯೇ ಇರುವ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮೊದಲು ಮನೆಗಳಿಗೆ ಹಕ್ಕು ಪತ್ರ, ಜಮೀನಿಗೆ ದಾಖಲೆಗಳನ್ನು ಸರ್ಕಾರ ನೀಡುವಂತೆ ಶಾಸಕ ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ವೈಯಕ್ತಿಕ ಕಾರಣಕ್ಕಾಗಿ ಜಮೀನು, ಮನೆಗಳನ್ನು ಬಿಟ್ಟು ಬಂದವರಲ್ಲ. ನಾಡಿಗೆ ಬೆಳಕು ಕೊಡುವ ಉದ್ದೇಶದಿಂದ ಸರ್ಕಾರವೇ ಜಲವಿದ್ಯುತ್ ಉತ್ಪಾದನೆಗಾಗಿ ಲಿಂಗನಮಕ್ಕಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆ ಯೋಜನೆಯಲ್ಲಿ ಮುಳುಗಡೆಗೆ ಒಳಗಾಗುವವರನ್ನು ಸರ್ಕಾರವೇ ಲಾರಿಯಲ್ಲಿ ಕರೆದುಕೊಂಡು ಬಂದು ಅರಣ್ಯ ಪ್ರದೇಶದಲ್ಲಿ ಬಿಟ್ಟಿತ್ತು ಎಂದರು.

1960ರಿಂದ 70ರವರೆಗೂ ಸರ್ಕಾರವೇ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಮಾಡಿತ್ತಾದರೂ ಇದುವರೆಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಇದರಿಂದಾಗಿ ಬಹುತೇಕ ಸಂತ್ರಸ್ತರಿಗೆ ಭೂ ಹಕ್ಕು ಸಿಕ್ಕಿಲ್ಲ. ನಿವೇಶನಗಳು ಲಭ್ಯವಾಗಿಲ್ಲ. ಎಲ್ಲೋ ಕಾಡಂಚಿನಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ವಿದ್ಯುತ್ ಯೋಜನೆಗಾಗಿ ತ್ಯಾಗಮಾಡಿದ ಕುಟುಂಬಗಳನ್ನೇ ಸರ್ಕಾರ ಮರೆತಿದೆ. ಎಲ್ಲಿಂದಲೋ ಬಂದ ಅಕ್ರಮ ವಲಸಿಗರ ಶೆಡ್‌ಗಳು ಅಕ್ರಮವಾಗಿವೆ ಎಂದು ಸರ್ಕಾರ ಅವನ್ನು ನೆಲಸಮ ಮಾಡಿದೆ. ಶೆಡ್‌ಗಳು ನೆಲಸಮವಾಗುತ್ತಿದ್ದಂತೆ ಅವರನ್ನು ಸಂತ್ರಸ್ತರೆಂದು ಪರಿಗಣಿಸಿ ಸರ್ಕಾರಿ ಮನೆಗಳನ್ನು ನೀಡಲು ಸರ್ಕಾರ ಮುಂದಾಗಿರುವುದು ಅಕ್ಷಮ್ಯ ಅಪರಾಧ ಎಂದರು.

ಕಳೆದ ಆರು ದಶಕಗಳಿಂದ ಸಂತ್ರಸ್ತರು ಮನೆ, ಭೂಮಿಗಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರದ ಗಮನಕ್ಕೆ ಬರುವುದಿಲ್ಲ. ಆದರೆ ಕಾಂಗ್ರೆಸ್‌ನ ವೋಟ್ ಬ್ಯಾಂಕ್ ಸಮುದಾಯವನ್ನು ಸಂತ್ರಸ್ತರೆಂದು ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ಫ್ಲಾಟ್ ಕೊಡಲು ಮುಂದಾಗಿದೆ. ಇದು ನಿಜವಾದ ಸಂತ್ರಸ್ತರಿಗೆ ಹಾಗೂ ಮನೆಗಳಿಗೆ ಅರ್ಜಿ ಹಾಕೊಂಡು ಕಾಯುತ್ತಿರುವ ಕನ್ನಡಿಗರಿಗೆ ಮಾಡುವ ದ್ರೋಹವಾಗಿದೆ. ಶರಾವತಿ ಸಂತ್ರಸ್ತರ ಬಗ್ಗೆ ನಿಷ್ಕಾಳಜಿ ತೋರಿಸದೆ ತಕ್ಷಣವೇ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಆಗ್ರಹಿಸಿದರು.

ಸುಪ್ರಿಂ ಕೋರ್ಟ್ ಸೂಚನೆಯಂತೆ ಶರಾವತಿ ಸಂತ್ರಸ್ತರ ಜಮೀನಿನ ಜಂಟಿ ಸರ್ವೇಯನ್ನು ಜಿಲ್ಲಾಡಳಿತ ಮಾಡಿಸಿದೆ. ಆದರೆ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡುತ್ತಿರುವ ಸುಮಾರು ೨ ಸಾವಿರ ಸಂತ್ರಸ್ತರ ಜಮೀನು ಸರ್ವೇಯಿಂದ ಕೈ ಬಿಡಲಾಗಿದೆ. ಇದರ ಬಗ್ಗೆ ಜಿಲ್ಲಾಡಳಿತ ಇನ್ನೂ ಕ್ರಮಕೈಗೊಂಡಿಲ್ಲ. ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಸಂತ್ರಸ್ತರ ಪಟ್ಟಿ ರಾಜ್ಯ ಸರ್ಕಾರಕ್ಕೆ ಹೋಗಲು ಇನ್ನೂ ೩-೪ ತಿಂಗಳು ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ನಿವಾಸಿಗಳಿಗೆ ಕಳೆದ ಎರಡೂವರೆ ವರ್ಷಗಳಿಂದ ಒಂದೇ ಒಂದು ಮನೆ ನೀಡಿಲ್ಲ. ಮೊದಲು ಇಲ್ಲಿನ ನಿವಾಸಿಗಳಿಗೆ ಮನೆಗಳನ್ನು ಕೊಡಲಿ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರಗಳನ್ನು ಕೊಡಲಿ. ಅದನ್ನು ಬಿಟ್ಟು ಕೋಗಿಲಿನ ಅಕ್ರಮ ನಿವಾಸಿಗಳಿಗೆ ಫ್ಲಾಟ್‌ಗಳನ್ನು ವಿತರಿಸಿದರೆ ಮುಳಗಡೆ ಸಂತ್ರಸ್ತರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಹಣಗೆರೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಪ್ರಮುಖರಾದ ಹೂವಪ್ಪ ಕೂಡಿ, ಅಶೋಕ್ ಕಿರುವಾಸೆ, ಸುಧಾಕರ್, ಬಿ.ಎಂ. ಕೃಷ್ಣಮೂರ್ತಿ, ರಾಮಣ್ಣ ಮತ್ತಿತರರು ಇದ್ದರು.