ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕಿಯರು ಮತ್ತು ನಿವೃತ್ತ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತದಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗುವುದಕ್ಕೆ ಸಾವಿತ್ರಿಬಾಯಿಪುಲೆ ಪ್ರಮುಖ ಕಾರಣ. ಮಹಿಳೆಯರಿಗೆ ಶಿಕ್ಷಣ ಕೊಡುವ ಮೂಲಕ ಹೊಸ ಕ್ರಾಂತಿಯನ್ನು ಆರಂಭಿಸಿದರು ಎಂದು ಮಾಜಿ ಸಚಿವ ಎನ್‌.ಮಹೇಶ್‌ ಹೇಳಿದರು.

ನಗರದ ಹರ್ಡೀಕರ್‌ ಭವನದಲ್ಲಿ ರಾಷ್ಟ್ರೀಯ ಭೀಮ ಪಡೆ ರಾಜ್ಯ ಮತ್ತು ಜಿಲ್ಲಾ ಘಟಕ ಆಯೋಜಿಸಿದ್ದ ಭಾರತ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ೧೯೪ನೇ ಜನ್ಮದಿನಾಚರಣೆ ಅಂಗವಾಗಿ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತದಲ್ಲಿ ೧೯೦೧ರಲ್ಲಿ ಸಾಕ್ಷರತೆ ಪ್ರಮಾಣ ಶೇ.೦೬ರಷ್ಟಿತ್ತು, ಮಹಿಳಾ ಸಾಕ್ಷರತೆ ಪ್ರಮಾಣ ಶೂನ್ಯವಿತ್ತು, ೧೯೫೦ರಲ್ಲಿ ಶೇ.೧೯ರಷ್ಟು ಹೆಚ್ಚಾಗಿ, ಮಹಿಳಾ ಸಾಕ್ಷರತೆ ಪ್ರಮಾಣ ಶೇ.೦೧ರಷ್ಟಿತ್ತು, ೨೦೨೫ರಲ್ಲಿ ಸಾಕ್ಷರತೆ ಪ್ರಮಾಣ ಶೇ.೭೬ರಷ್ಟಿದೆ, ಮಹಿಳಾ ಸಾಕ್ಷರತೆ ಶೇ.೬೯ರಷ್ಟಿದೆ. ಶಿಕ್ಷಣದಲ್ಲಿ ಆಗಿರುವ ಕ್ರಾಂತಿಕಾರಕ ಬೆಳವಣಿಗೆಗೆ ಜ್ಯೋತಿ ಬಾಪುಲೆ, ಸಾವಿತ್ರಿಬಾಯಿಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಕಾರಣ ಎಂದು ನುಡಿದರು.

೨೦೪೭ಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ೧೦೦ ವರ್ಷವಾಗುತ್ತದೆ, ಆಗ ಪುರುಷ ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ ಶೇ.೧೦೦ರಷ್ಟು ಸಾಧಿಸುವ ಸಂಕಲ್ಪವಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಭೀಮ ಪಡೆ ರಾಜ್ಯಾಧ್ಯಕ್ಷ ಎಚ್.ಎ.ಆತ್ಮಾನಂದ ಮಾತನಾಡಿ, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನುಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ‍್ಯಹರಣದ ಪ್ರಮುಖ ಭಾಗ ವಿದ್ಯೆಯೇ ಆಗಿತ್ತು ಎನ್ನಬಹುದು ಎಂದು ಹೇಳಿದರು.

ಶಿಕ್ಷಣದ ಮುಖಾಂತರ ಮಾತ್ರ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆಯನ್ನು ತರಲು ಸಾಧ್ಯ ಎನ್ನುವುದು ಜ್ಯೋತಿ ಬಾಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಿದ್ಧಾಂತವಾಗಿತ್ತು. ಅದಕ್ಕೆಂದೇ ಅವರು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೂದ್ರರು- ಅತಿಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕಿಯರು ಮತ್ತು ನಿವೃತ್ತ ಶಿಕ್ಷಕಿಯರಿಗೆ ಅಕ್ಷರದವ್ವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಡಿಎಸ್ ನಾಯಕ ಬಿ.ಆರ್.ರಾಮಚಂದ್ರು, ಪ್ರಾಧ್ಯಾಪಕಿ ಪ್ರೊ.ಪುಷ್ಪ, ಬಿಜೆಪಿ ವೈದ್ಯಕೀಯ ಪ್ರಕೋಷ್ಟ ರಾಜ್ಯಾಧ್ಯಕ್ಷ ಡಾ.ಸದಾನಂದ, ಬಿಜೆಪಿ ಉಪಾಧ್ಯಕ್ಷ ಕೆಂಪಬೋರಯ್ಯ, ನಗರಘಟಕ ಅಧ್ಯಕ್ಷ ವಸಂತಕುಮಾರ್, ರಾಷ್ಟ್ರೀಯ ಭೀಮ ಪಡೆ ರಾಜ್ಯ ಉಪಾಧ್ಯಕ್ಷ ಕೆ.ಆರ್.ನಿತ್ಯಾನಂದ್, ಜಿಲ್ಲಾ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ವೈರಮುಡಿ, ಕಾರ್ಯದರ್ಶಿ ಶಶಿಕುಮಾರ್, ಸುಧಾಮ, ಮಂಗಳಕುಮಾರಿ, ಸರೋಜಿನಿ ಮತ್ತಿತರರಿದ್ದರು.