ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಒಳ್ಳೆಯ ತಂಡಗಳನ್ನು ಆಹ್ವಾನಿಸಿ, ಹೆಚ್ಚು ಯುವತಿಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು.
ಗದಗ: ಕ್ರೀಡೆಗಳಲ್ಲಿ ಗ್ರಾಮೀಣ ಪ್ರದೇಶಗಳ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸದರ ಕ್ರೀಡಾ ಮಹೋತ್ಸವ ಏರ್ಪಡಿಸಿದ್ದಾರೆ. ಜಿಲ್ಲೆಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಸಂಸದರ ಕ್ರೀಡಾ ಮಹೋತ್ಸವದ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಯುವಕರ ಸ್ಫೂರ್ತಿಯ ಸೆಲೆಯನ್ನು ನಿರಂತರವಾಗಿ ಇಟ್ಟುಕೊಂಡು ಒಂದು ಸದೃಢ ಭಾರತ ಮತ್ತು ಚೈತನ್ಯವಾಗಿರುವ ಭಾರತ ಕಟ್ಟಲು 45 ವರ್ಷ ವಯೋಮಾನದೊಳಗಿರುವ ಯುವಕರನ್ನು ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಮಾಡುತ್ತಿದೆ. ಉದಾಹರಣೆಗೆ ಎನ್‌ಇಪಿಯಲ್ಲಿ ಬಹಳ ದೊಡ್ಡ ಬದಲಾವಣೆ ತರಲು ಒಬ್ಬ ವಿದ್ಯಾರ್ಥಿ ಒಂದೇ ಸಮಯದಲ್ಲಿ ಮೂರು ನಾಲ್ಕು ಡಿಗ್ರಿ ಪಡೆಯಲು ಅವಕಾಶವಿದೆ.
ಅದೇ ರೀತಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಲು ಪ್ರಾಥಮಿಕ ಹಂತದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಗತ್ತಿನ ಎಲ್ಲ ಒಳ್ಳೆಯ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಪ್ರೊ. ಯು.ಆರ್. ರಾವ್ ಅವರ ಅಧ್ಯಕ್ಷತೆಯಲ್ಲಿ ನೂತನ ಶಿಕ್ಷಣ ಪಾಲಿಸಿ ತಂದಿದ್ದೇವೆ. ಇದರಲ್ಲಿ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಆದ್ಯತೆ ನೀಡಿದೆ ಎಂದರು.ಕೇಂದ್ರ ಸರ್ಕಾರ ಕ್ರೀಡೆಗೆ ಮಹತ್ವ ನೀಡಿದೆ. ಅದಕ್ಕೆ ಮೊದಲು ಕಳೆದ ಹತ್ತು ವರ್ಷದಿಂದ ಫಿಟ್ ಇಂಡಿಯಾ ಕಾರ್ಯಕ್ರಮ ಮಾಡಿದ್ದೇವು. ಆ ಮೇಲೆ ಒಲಿಂಪಿಕ್ ಬಂದಾಗ ಖೆಲೋ ಇಂಡಿಯಾ ಮಾಡಿದರು. ಒಲಿಂಪಿಕ್ ಹತ್ತಿರ ಬಂದಾಗ ಜಿತೊ ಇಂಡಿಯಾ ಮಾಡಿದರು. ಅದರಿಂದ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚು ಪದಕ ಪಡೆಯಲು ಸಾಧ್ಯವಾಯಿತು. ಈಗ ಗ್ರಾಮೀಣ ಪ್ರದೇಶಗಳಲ್ಲಿ ಯುವಕರನ್ನು ಆಸಕ್ತಿಯಿಂದ ಬಳಸಿಕೊಳ್ಳಲು ಸಂಸದರ ಕ್ರೀಡೋತ್ಸವ ಮಾಡಿದ್ದಾರೆ. ಇಂತಹ ಚಟುವಟಿಕೆಯಲ್ಲಿ ಸಂಸದರು ಪಾಲ್ಗೊಳ್ಳಲು ಈ ಯೋಜನೆ ಮಾಡಿದ್ದಾರೆ. ಜಿಪಂ, ಪೊಲೀಸ್ ಇಲಾಖೆ ಸಹಯೋಗ ಮುಖ್ಯ. ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಮಂಗಳವಾರದಿಂದಲೇ ನೋಂದಣಿ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗುಂಪು ಆಟಗಳಲ್ಲಿ ಖೋ ಖೋ, ವಾಲಿಬಾಲ್, ಕಬಡ್ಡಿ, ಅಥ್ಲೆಟಿಕ್ ನಲ್ಲಿ 100 ಮೀಟರ್, 4x100 ಮೀಟರ್ ರಿಲೇ, ಹಗ್ಗ- ಜಗ್ಗಾಟ ಸೇರಿದಂತೆ ಕ್ರೀಡೆಗಳನ್ನು ಆಡಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಒಳ್ಳೆಯ ತಂಡಗಳನ್ನು ಆಹ್ವಾನಿಸಿ, ಹೆಚ್ಚು ಯುವತಿಯರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಎಲ್ಲ ತಂಡಗಳಿಗೂ ಟಿ ಶರ್ಟ್ ನೀಡಬೇಕು. ವಿಜೇತರಾದ ತಂಡಗಳಿಗೆ ಬಹುಮಾನ ನೀಡುವ ವ್ಯವಸ್ಥೆ ಮಾಡಬೇಕು. ಕೊನೆಯ ದಿನ ಸರ್ಕಾರಿ ನೌಕರರಿಗೆ ಒಂದು ದಿನ ಪ್ರದರ್ಶನ ಮ್ಯಾಚ್ ಆಡಿಸಿ ಅವರಿಗೂ ಬಹುಮಾನ ಕೋಡೊಣ ಎಂದರು.ಈ ಸಂದರ್ಭದಲ್ಲಿ ಶಾಸಕರಾದ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ, ಜಿಲ್ಲಾ ಯುವಜನ, ಕ್ರೀಡಾ ಮತ್ತು ಸೇವಾ ಇಲಾಖೆಯ ಅಧಿಕಾರಿ ಶರಣು ಗೊಗೇರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.