ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ದಾರಿಯೂದ್ದಕ್ಕೂ ಭಕ್ತರು ಚಾ,ಕಾಫೀ, ಬಿಸ್ಕೇಟ್,ನೀರು, ಎಳೆನೀರು, ತಿನಿಸು ಹೀಗೆ ನಾನಾ ಭಕ್ತಿ ಸೇವೆ ಸಮರ್ಪಣೆ ಮಾಡಿದರು
ಕೊಪ್ಪಳ: ನಗರದ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವ ಪ್ರಯುಕ್ತ ಸೋಮವಾರ ಭಕ್ತರು ಜಿಲ್ಲೆ, ಅನ್ಯ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಗವಿಮಠಕ್ಕೆ ಆಗಮಿಸಿದರು.
ಕೆಲ ಭಕ್ತರು ದೂರದ ಊರಿನಿಂದ ಪಾದಯಾತ್ರೆ ಮೂಲಕ ಬರಲು ಭಾನುವಾರ ಮಧ್ಯಾಹ್ನದಿಂದಲೇ ಪಾದಯಾತ್ರೆ ಆರಂಭಿಸಿದ್ದರು. ಇನ್ನೂ ಕೆಲವರು ಭಾನುವಾರ ಸಂಜೆ, ರಾತ್ರಿ ಪಾದಯಾತ್ರೆ ಆರಂಭಿಸಿದರು. ರಾತ್ರಿಯನ್ನದೆ ಪಾದಯಾತ್ರೆ ಮೂಲಕ ಗವಿಸಿದ್ದೇಶ್ವರ ಜಾತ್ರೆಗೆ ಕಾಲ್ನಡಿಗೆಯಲ್ಲಿಯೇ ಬಂದರು. ಸೋಮವಾರ ಬೆಳಗಿನ ಜಾವ ಸಹ ಭಕ್ತರು ತಂಡೋಪ ತಂಡವಾಗಿ ಶ್ರೀಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದರು. ಗದಗ ರಸ್ತೆ, ಹೊಸಪೇಟೆ, ಕುಷ್ಟಗಿ ರಸ್ತೆ, ಸಿಂದೋಗಿ, ಗಂಗಾವತಿ ರಸ್ತೆ ಹೀಗೆ ನಾನಾ ಕಡೆಯಿಂದ ಸಾವಿರಾರು ಭಕ್ತರು ಆಗಮಿಸಿದರು. ಕೆಲವರು ಪಾದರಕ್ಷೆ ಸಹ ಧರಿಸದೆ ಆಗಮಿಸುತ್ತಿರುವುದು ಕಂಡು ಬಂದಿತು.ಪಾದಯಾತ್ರಿಗಳಿಗೆ ಭಕ್ತಿ ಸೇವೆ:ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ದಾರಿಯೂದ್ದಕ್ಕೂ ಭಕ್ತರು ಚಾ,ಕಾಫೀ, ಬಿಸ್ಕೇಟ್,ನೀರು, ಎಳೆನೀರು, ತಿನಿಸು ಹೀಗೆ ನಾನಾ ಭಕ್ತಿ ಸೇವೆ ಸಮರ್ಪಣೆ ಮಾಡಿದರು. ಕಾಲ್ನಡಿಗೆ ಮೂಲಕ ಆಗಮಿಸುವ ಭಕ್ತರು ಧಣಿವಾರಿಸಿಕೊಂಡು ಹೋಗಲು ಕೆಲವು ಕಡೆ ನೆರಳಿನ ವ್ಯವಸ್ಥೆ, ಆರೋಗ್ಯ ಸೇವೆ ಒದಗಿಸಲಾಗಿತ್ತು. ಪಾದಯಾತ್ರಿಗಳು ಕೊಂಚ ವಿಶ್ರಾಂತಿ ಪಡೆದು ಮತ್ತೆ ತಮ್ಮ ಕಾಲ್ನಡಿಗೆ ಮೂಲಕ ಗವಿಮಠಕ್ಕೆ ತೆರಳುತ್ತಿದ್ದರು.