ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ, ಕುಡಿಯುವ ನೀರು, ವಾಹನ ಸಂಚಾರ ವ್ಯವಸ್ಥೆ, ವಿದ್ಯುತ್ ಸಂಪರ್ಕ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಜನರಿಗೆ ಯಾವುದೇ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಬೇಕು.

ಗ್ರಾಮದೇವಿ ಜಾತ್ರೆಯ ಪೂರ್ವಸಿದ್ಧತಾ ಸಭೆಯಲ್ಲಿ ಶಿವರಾಮ ಹೆಬ್ಬಾರ ಸೂಚನೆ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛತೆ, ಕುಡಿಯುವ ನೀರು, ವಾಹನ ಸಂಚಾರ ವ್ಯವಸ್ಥೆ, ವಿದ್ಯುತ್ ಸಂಪರ್ಕ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಜನರಿಗೆ ಯಾವುದೇ ಸಮಸ್ಯೆ ಬಾರದಂತೆ ಕಾರ್ಯನಿರ್ವಹಿಸಬೇಕು. ಲೋಪವಾದಲ್ಲಿ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಪಪಂ ಸಭಾಭವನದಲ್ಲಿ ಗ್ರಾಮದೇವಿ ಜಾತ್ರೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಟಗಾರ ಕ್ರಾಸ್‌ನಿಂದ ನಿಸರ್ಗಮನೆ ಮೂಲಕ ಆನಗೋಡ ರಸ್ತೆಗೆ ತಲುಪುವಂತೆ ಪರ್ಯಾಯ ಮಾರ್ಗವನ್ನು ಪರಿಶೀಲಿಸಲಾಗಿದ್ದು, ೧೫ ಟನ್ ವರೆಗಿನ ವಾಹನಗಳು ಮಾತ್ರ ಓಡಾಡಲು ಅವಕಾಶವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹಿಟ್ಟಿನಬೈಲ್, ಇಡಗುಂದಿ ಹಾಗೂ ಗುಳ್ಳಾಪುರದ ಮೈದಾನಗಳಲ್ಲಿ ಬೃಹತ್ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ದೊಡ್ಡ ವಾಹನಗಳನ್ನು ೬ರಿಂದ ೯ ಗಂಟೆ ಹಾಗೂ ೯ರಿಂದ ೧೧ ಗಂಟೆವರೆಗೆ 2 ಹಂತಗಳಲ್ಲಿ ನಿಲುಗಡೆ ಮಾಡಿ, ನಂತರ ಓಡಾಡಲು ಬಿಡಬೇಕು ಎಂದು ಪೊಲೀಸರಿಗೆ ಶಾಸಕರು ಸೂಚಿಸಿದರು. ಕಾರು, ಜೀಪು ಸೇರಿದಂತೆ ಸಣ್ಣ ವಾಹನಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.

ಗಟಾರ ಹೂಳೆತ್ತುವುದು, ಗಿಡ ಗಂಟಿ ಸ್ವಚ್ಛತೆಯ ಕಾರ್ಯ ಆರಂಭವಾಗಿದೆ. ಕುಡಿಯುವ ನೀರಿನ ಟ್ಯಾಂಕರ್, ಬೀದಿದೀಪ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ತಿಳಿಸಿದರು. ಜಾತ್ರೆಯಲ್ಲೂ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದರು. ೭ ನೀರಿನ ಟ್ಯಾಂಕರ್‌ಗಳನ್ನು ಸಿದ್ಧತೆಯಲ್ಲಿಟ್ಟುಕೊಂಡಿರುವಂತೆ ಶಾಸಕರು ಸೂಚಿಸಿದರು.

ಒಂದು ಅಗ್ನಿಶಾಮಕ ವಾಹನ, ಎರಡು ಅಗ್ನಿ ಬೈಕ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧತೆಯಲ್ಲಿ ಇರಿಸುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು.

ಜಾತ್ರೆ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನಿರಂತರ ವಿದ್ಯುತ್ ಸಂಪರ್ಕ ನೀಡಲಾಗುವುದೆಂದು ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಹೇಳಿದರು.

೨೫ ಹೆಚ್ಚುವರಿ ಬಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಾತ್ರೆಗಾಗಿ ವಿಶೇಷ ಕೇಂದ್ರ ತೆರೆದು, ಜನರಿಗೆ ಉಪಯುಕ್ತವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಮಾಹಿತಿ ನೀಡಿದರು.

ಬೀದಿನಾಯಿ ಹಾಗೂ ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪಪಂ ಅಧಿಕಾರಿಗಳಿಗೆ ಹೆಬ್ಬಾರ್ ತಿಳಿಸಿದರು.

ತಹಸೀಲ್ದಾರ ಚಂದ್ರಶೇಖರ ಹೊಸಮನಿ, ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ತಾಲೂಕಿನ ವಿವಿಧ ಇಲಾಖಾ ಅಧಿಕಾರಿಗಳು, ಪಪಂನ ಮಾಜಿ ಸದಸ್ಯರು, ಸಾರ್ವಜನಿಕರು ಇದ್ದರು.