ಚನ್ನಪಟ್ಟಣ: ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಗಳ ಕುಟುಂಬ ಕಲ್ಯಾಣಕ್ಕಾಗಿ ಸಾರ್ವಜನಿಕರು ಮತ್ತು ಪೊಲೀಸರು ಹೆಚ್ಚು ಪೊಲೀಸ್ ಧ್ವಜಗಳನ್ನು ಖರೀದಿಸಿ ನೆರವಾಗಿ ಪೊಲೀಸರಿಗೆ ಮಾನಸಿಕ ಸ್ಥೆರ್ಯ ತುಂಬಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ಮನವಿ ಮಾಡಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜ ಖರೀದಿಸಿ ಮಾತನಾಡಿದ ಅವರು, ಪೊಲೀಸ್ ದಿನಾಚರಣೆ ಮತ್ತು ಪೊಲೀಸ್ ಧ್ವಜ ದಿನಾಚರಣೆಯ ಮಹತ್ವವನ್ನು ವಿವರಿಸಿದರು.

ಏ.೨ರಂದು ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಅವಿಶ್ರಾಂತ ಸೇವೆ ಸಲ್ಲಿಸಿದ ಪೊಲೀಸರ ಸೇವೆ ಮತ್ತು ತ್ಯಾಗ ಸ್ಮರಿಸುತ್ತಾ ಕರ್ತವ್ಯನಿರತ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕುಟುಂಬಗಳ ಕ್ಷೇಮಾಭಿವೃದ್ಧಿ ಕಾರ್ಯಗಳ ನಿಧಿಗಾಗಿ ಪೊಲೀಸ್ ಧ್ವಜ ದಿನಾಚರಣೆ ನಡೆಸುತ್ತೇವೆ ಎಂದು ತಿಳಿಸಿದರು.

೨೦೨೫ರ ಸಾಲಿನಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ಸಹಕಾರದಿಂದ ಪೊಲೀಸ್ ಧ್ವಜ ಮಾರಾಟದಿಂದ ೨೭.೪೫ ಲಕ್ಷ ರು. ಸಂಗ್ರಹವಾಗಿತ್ತು. ಅದರಲ್ಲಿ ಸೇವಾನಿರತ ಹಾಗೂರ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಗಳ ಕಲ್ಯಾಣ ಕಾರ್ಯಕ್ಕೆ ತಲಾ ೧೩.೭೨ ಲಕ್ಷ ರು.ಗಳನ್ನು ಹಂಚಲಾಗಿದೆ ಎಂದರು.

ಪೊಲೀಸ್ ಸಮುದಾಯ ಭವನ ಮತ್ತು ಶಿಶು ವಿಹಾರ ಕೇಂದ್ರ ಸ್ಥಾಪನೆ, ಶುದ್ಧ ಕುಡಿಯುವ ನೀರು ಘಟಕ, ಪೊಲೀಸರ ವೈದ್ಯಕೀಯ ವೆಚ್ಚ. ಆರೋಗ್ಯ ಶಿಬಿರ, ಪೊಲೀಸ್ ಮಕ್ಕಳ ವ್ಯಾಸಂಗಕ್ಕೆ ಪ್ರೋತ್ಸಾಹ ಸೇರಿದಂತೆ ಪೊಲೀಸರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಈ ನಿಧಿ ಬಳಸಲಾಗುವುದು ಎಂದು ಮಾಹಿತಿ ನೀಡಿದರು.


ನಿವೃತ್ತ ಎಎಸ್ಪಿ ಸುರೇಶ್ ಪೊಲೀಸ್ ಧ್ವಜ ಬಿಡುಗಡೆ ಮಾಡಿ, ಪೊಲೀಸ್ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದನ್ನು ಮೆಲುಕು ಹಾಕಿದರು.

ಕರ್ನಾಟಕ ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಬಹಳ ವಿಶ್ವಾಸ, ನಂಬಿಕೆ ಇದೆ. ಅದರೆ, ಇಲಾಖೆಯಲ್ಲಿ ಒಬ್ಬಿಬ್ಬರೂ ಮಾಡುವ ಅಚಾತುರ್ಯ, ಸಣ್ಣಪುಟ್ಟ ತಪ್ಪುಗಳಿಂದ ಸಾರ್ವಜನಿಕರು ಪೊಲೀಸರನ್ನು ಅಪನಂಬಿಕೆಯಿಂದ ನೋಡುವಂತಾಗಿದೆ. ನಮ್ಮನ್ನು ನಂಬಿ ಭರವಸೆಯಿಂದ ಠಾಣೆಗೆ ಬರುವ ಯಾವುದೇ ವ್ಯಕ್ತಿಯನ್ನು ನಮ್ಮ ಪೋಷಕರೆಂದು ಭಾವಿಸಿ, ತಾಳ್ಮೆಯಿಂದ ಅವರ ಸಮಸ್ಯೆಗಳನ್ನು ಕೇಳಿ ಸ್ಪಂದಿಸಬೇಕು ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಎಎಸ್ಪಿ ಸುರೇಶ್ ಹಾಗೂ 8 ನಿವೃತ್ತ ಪೊಲೀಸರನ್ನು ಗೌರವಿಸಲಾಯಿತು. ಎಎಸ್ಪಿ ರಾಮಚಂದ್ರಯ್ಯ, ರಾಜೇಂದ್ರ ಉಪಸ್ಥಿತರಿದ್ದರು. ಚನ್ನಪಟ್ಟಣ ಪೊಲೀಸ್ ಉಪವಿಭಾಗಾಧಿಕಾರಿ ಕೆ.ಸಿ.ಗಿರಿ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ನಿವೃತ್ತ ಅಧಿಕಾರಿ, ಸಿಬ್ಬಂದಿ ಕುಟುಂಬಸ್ಥರು ಭಾಗವಹಿಸಿದ್ದರು.

ಪೊಟೋ೩ಸಿಪಿಟಿ೨: ಚನ್ನಪಟ್ಟಣದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ.