ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ ಪ್ರಕರಣ ಸಂಬಂಧ ಮತ್ತೆ ಆರು ಜನ ಅಪ್ರಾಪ್ತ ಬಾಲಕರು ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿ, 57 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ಜಾರ್ಖಂಡ್ ರಾಜ್ಯದ ಸುಭಾನ್ ಕುಮಾರ್, ಸಜೀತ್ ಕುಮಾರ್ ಹಾಗೂ ಈಶಾಲ್ ಕುಮಾರ್ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿದ್ದು, ಈ ಆರೋಪಿಗಳಿಂದ 57 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಕಳೆದ ವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಅಡಿ ಬೆಂಗಳೂರು-ರಾಯಲ್‌ ಚಾಲೆಂಜರ್ಸ್ (ಆರ್‌ಸಿಬಿ) ಮತ್ತು ಹೈದರಾಬಾದ್‌ ಸೈನ್ ರೈಸರ್ಸ್ (ಎಸ್‌ಆರ್‌ಎಚ್‌) ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಮೊಬೈಲ್ ಕಳ್ಳತನ ಕೃತ್ಯ ನಡೆದಿತ್ತು. ಬಿಗಿ ಖಾಕಿ ಕಣ್ಗಾವಲಿನಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದರು.

ಕೃತ್ಯದ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಜಾರ್ಖಂಡ್ ಗ್ಯಾಂಗ್‌ ಅನ್ನು ಸೆರೆ ಹಿಡಿದಿದ್ದಾರೆ.


ವಿಮಾನ, ರೈಲಿನಲ್ಲಿ ಬಂದ ತಂಡ: ಮೊದಲು ಸುಭಾನ್‌ ಕುಮಾರ್ ಹಾಗೂ ಮೂವರು ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿ 18 ಮೊಬೈಲ್‌ಗಳನ್ನು ಜಪ್ತಿ ಮಾಡಲಾಯಿತು. ಈಗ ಬಂಧಿತ ಆರೋಪಿಗಳಿಂದ 57 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 13 ಆರೋಪಿಗಳು ಬಂಧಿತರಾಗಿದ್ದು, 75 ಮೊಬೈಲ್‌ಗಳು ಜಪ್ತಿಯಾಗಿವೆ.

ಐಪಿಎಲ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ ಮಾಡುವ ಉದ್ದೇಶದಿಂದಲೇ ಆರೋಪಿಗಳು ಜಾರ್ಖಂಡ್‌ನಿಂದ ವಿಮಾನ ಹಾಗೂ ರೈಲಿನಲ್ಲಿ ಪ್ರತ್ಯೇಕವಾಗಿ ನಗರಕ್ಕೆ ಬಂದಿದ್ದರು. ಬಳಿಕ ಪ್ರತ್ಯೇಕವಾಗಿ ತಂಡ ರಚಿಸಿಕೊಂಡು ಮೊಬೈಲ್ ಕಳ್ಳತನ ಎಸಗಿತ್ತು. ಕೆಲವರು ಪ್ರೇಕ್ಷಕರ ಸೋಗಿನಲ್ಲಿ ಕ್ರೀಡಾಂಗಣದೊಳಗೆ ತೆರಳಿ ಹಾಗೂ ಇನ್ನುಳಿದವರು ದಟ್ಟಣೆ ವೇಳೆ ಮೆಟ್ರೋ ನಿಲ್ದಾಣ ಮತ್ತು ಕ್ರೀಡಾಂಗಣ ಸುತ್ತಮುತ್ತ ಮೊಬೈಲ್ ಎಗರಿಸಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ಊರಿನಲ್ಲಿ ಬಚ್ಚಿಟ್ಟಿದ್ದರು: ಮೊಬೈಲ್ ಕಳ‍ವು ಮಾಡಿ ಕೆಲವರು ಮತ್ತೆ ರೈಲಿನಲ್ಲಿ ತಮ್ಮೂರಿಗೆ ತೆರಳಿ ಮೊಬೈಲ್ ಗಳನ್ನು ಬಚ್ಚಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿನ ಪಂದ್ಯದ ವೇಳೆಯೂ

ಕಳ್ಳತನಕ್ಕೆ ಸಿದ್ಧವಾಗಿದ್ದ ತಂಡ!

ಏ.5 ರಂದು ಭಾನುವಾರ ನಡೆಯಲಿರುವ ಆರ್‌ಸಿಬಿ-ಸಿಎಸ್‌ಕೆ ಪಂದ್ಯದಲ್ಲೂ ಕೈ ಚಳಕ ತೋರಿಸಲು ಜಾರ್ಖಂಡ್ ಗ್ಯಾಂಗ್ ಸಿದ್ಧವಾಗಿತ್ತು. ಆದರೆ ಅಷ್ಟರಲ್ಲಿ ಖಾಕಿ ಬಲೆಗೆ ಬಿದ್ದಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಪೊಲೀಸರ ಕಣ್ತಪ್ಪಿಸಿ ಮೊಬೈಲ್ ಕಳ್ಳತನ ಮಾಡಿದ ಉತ್ಸಾಹದಲ್ಲಿ ಆರೋಪಿಗಳು ಮತ್ತೊಮ್ಮೆ ಕೈ ಚಳಕಕ್ಕೆ ಮುಂದಾಗಿದ್ದರು ಎಂದು ಮೂಲಗಳು ಹೇಳಿವೆ.