ಕನ್ನಡಪ್ರಭ ವಾರ್ತೆ ಬೆಂಗಳೂರು

ಐಪಿಎಲ್‌ ಟಿಕೆಟ್‌ ಹೆಸರಿನಲ್ಲಿ ವಂಚನೆ ಪ್ರಕರಣದ ಸಂಬಂಧ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಿತವಾದ ವ್ಯಕ್ತಿಯೊಬ್ಬ ಐಪಿಎಲ್‌ ಟಿಕೆಟ್‌ ಕೊಡಿಸುವುದಾಗಿ ಹೇಳಿ ಟೆಕ್ಕಿಯೊಬ್ಬನಿಂದ 1.46 ಲಕ್ಷ ರು. ಪಡೆದು ವಂಚಿಸಿರುವ ಘಟನೆ ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ 25 ವರ್ಷದ ಮಹದೇವಪುರ ನಿವಾಸಿಯಾದ ಟೆಕ್ಕಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುದಾರರು ಮಾ.30 ರ ಸಂಜೆ 7 ಗಂಟೆಯ ಸಮಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯು ಟಿಕೆಟ್‌ ನೀಡುವುದಾಗಿ ಹೇಳಿದ್ದು ಇದನ್ನು ನಂಬಿದ್ದ ಅವರು, ತಮ್ಮ ಹಾಗೂ ಅವರ ತಾಯಿಯ ವಿವಿಧ ಖಾತೆಗಳಿಂದ 1.46 ಲಕ್ಷ ರು.ಗಳನ್ನು ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ಆರೋಪಿಯು ಹಣ ಹಾಕಿಸಿಕೊಂಡು ಟಿಕೆಟ್‌ ನೀಡದೆ ವಂಚಿಸಿದ್ದಾನೆ. ಆದ್ದರಿಂದ ಆ ವ್ಯಕ್ತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ದೂರಿನಲ್ಲಿ ಟೆಕ್ಕಿ ಉಲ್ಲೇಖಿಸಿದ್ದಾರೆ.

ಸ್ವಯಂ ಪ್ರೇರಿತ ಪ್ರಕರಣ ದಾಖಲು: ಮತ್ತೊಂದು ಪ್ರಕರಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್‌ ಟಿಕೆಟ್‌ ಬೇಕಾದಲ್ಲಿ ಸಂಪರ್ಕಿಸಿ ಎಂದು ನಕಲಿ ಲಿಂಕ್‌ ಕಳುಹಿಸಿ ವಂಚಿಸುತ್ತಿರುವ ಸೈಬರ್‌ ವಂಚಕರ ವಿರುದ್ಧ ಹುಳಿಮಾವು ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಬಂಧ ಹುಳಿಮಾವು ಠಾಣೆಯ ಪೊಲೀಸ್‌ ಕಾನ್‌ಸ್ಟೇಬಲ್‌ ರಾಮಕೃಷ್ಣ ಎಂಬುವರು ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ರಾಯಲ್‌ ಚಾಲೆಂಜರ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಏ.5 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿದ್ದು, ಈ ಪಂದ್ಯದ ಟಿಕೆಟ್‌ಗಳು ಮಾರಾಟವಾಗುತ್ತಿದ್ದು, ರಾಮಕೃಷ್ಣ ಅವರು ಶನಿವಾರ ಫೇಸ್‌ಬುಕ್‌ ನೋಡುವಾಗ ಕೆಲವು ವ್ಯಕ್ತಿಗಳು ಐಪಿಎಲ್‌ ಧಮಾಕ ಸೇಲ್‌ ಹೆಸರಿನಲ್ಲಿ ಟಿಕೆಟ್‌ ಲಭ್ಯವಿದ್ದು, ನಿಮಗೆ ಟಿಕೆಟ್‌ ಬೇಕಾದಲ್ಲಿ ನಾವು ನೀಡುತ್ತಿರುವ ಲಿಂಕ್‌ ಅನ್ನು ಸಂಪರ್ಕಿಸುವಂತೆ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ವಂಚಕರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ರಾಮಕೃಷ್ಣ ಉಲ್ಲೇಖಿಸಿದ್ದಾರೆ.